ADVERTISEMENT

ಪುಂಡಾನೆ ಸೆರೆಗೆ ತುರ್ತು ಕ್ರಮ ವಹಿಸಿ: ಸಚಿವ ಖಂಡ್ರೆ

ಹೊಸ ಪ್ರದೇಶದಲ್ಲಿ ಆನೆ ಕಾಣಿಸಿಕೊಂಡರೆ ಕೂಡಲೇ ಕಾಡಿಗೆ ಓಡಿಸಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 6:16 IST
Last Updated 29 ಜುಲೈ 2025, 6:16 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಚಿಕ್ಕಮಗಳೂರು: ಹೊಸ ಪ್ರದೇಶದಲ್ಲಿ ಆನೆಗಳು ಕಾಣಿಸಿಕೊಂಡಾಗ ನೆರೆ ಜಿಲ್ಲೆಯ ಆನೆ ಕ್ಷಿಪ್ರ ಕಾರ್ಯಪಡೆ ನೆರವು ಪಡೆದು ಆನೆಗಳನ್ನು ಕಾಡಿಗೆ ಓಡಿಸಬೇಕು. ಪುಂಡಾನೆಗಳಿದ್ದರ ಸೆರೆ ಹಿಡಿಯಬೇಕು ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು, ‘ಬಾಳೆಹೊನ್ನೂರು ಬಳಿ ನಾಲ್ಕು ದಿನಗಳ ಅಂತರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಮಾನವ-ವನ್ಯಜೀವಿ ಸಂಘರ್ಷ ಇರುವ ವಲಯಗಳ ಮೇಲೆ ಉನ್ನತಾಧಿಕಾರಿಗಳು ಸತತ ನಿಗಾ ಇಡಬೇಕು’ ಎಂದು ತಿಳಿಸಿದರು.

ಜನರ ಅಮೂಲ್ಯ ಜೀವ ಮತ್ತು ರೈತರ ಬೆಳೆ ರಕ್ಷಣೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳಬೇಕು. ಆನೆಗಳು ನಾಡಿನಲ್ಲಿ ಕಾಣಿಸಿಕೊಂಡ ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಆನೆಗಳನ್ನು ಕಾಡಿಗೆ ಮರಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ADVERTISEMENT

ಆನೆ ಕಂದಕಗಳು ಸತತ ಮಳೆಯಿಂದ ಮುಚ್ಚಿ ಹೋಗಿವೆ. ಸೌರ ತಂತಿ ಬೇಲಿ, ಟೆಂಟಕಲ್ ಬೇಲಿಗಳು ಮರಗಳು ಉರುಳಿದ್ದರಿಂದ ಸಂಪರ್ಕ ಕಡಿದುಕೊಂಡಿದೆ ಎಂಬ ದೂರುಗಳಿವೆ. ಕೂಡಲೇ ಇವುಗಳ ನಿರ್ವಹಣೆ ಮಾಡಬೇಕು. ಅರಣ್ಯ ಗಸ್ತು ಸಿಬ್ಬಂದಿ ಈ ಬಗ್ಗೆ ನಿರಂತರವಾಗಿ ನಿಗಾ ಇರಿಸಬೇಕು. ಉನ್ನತಾಧಿಕಾರಿಗಳಿಗೆ ವರದಿ ಮಾಡಿ ದುರಸ್ತಿ ಮಾಡಿಸಬೇಕು ಎಂದು ತಾಕೀತು ಮಾಡಿದರು.

ಆನೆಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ಹೆಚ್ಚುವರಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಕೂಡಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಕಾಮಗಾರಿ ಆರಂಭಿಸಬೇಕು. ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನರ ಅಮೂಲ್ಯ ಜೀವ ರಕ್ಷಣೆಗೆ ಮುಂದಾಗಬೇಕು ಎಂದರು.

ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರತಿ ವೃತ್ತದ ಅಧಿಕಾರಿಗಳೊಂದಿಗೆ ಮುಖ್ಯ ವನ್ಯಜೀವಿ ಪರಿಪಾಲಕರು ವಾರಕ್ಕೊಮ್ಮೆ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿ ಸೂಚನೆ ನೀಡಬೇಕು. ಸಂಘರ್ಷ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದೂ ನಿರ್ದೇಶನ ನೀಡಿದರು.

ಹೊರ ಗುತ್ತಿಗೆಯ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸಲು ಮತ್ತು ಅವರೆಲ್ಲರಿಗೂ ಅಪಾಯ ಭತ್ಯೆ, ಆಹಾರ ಭತ್ಯೆ ಸಕಾಲದಲ್ಲಿ ಪಾವತಿ ಆಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಈ ಬಗ್ಗೆ ಇನ್ನು ದೂರು ಬಂದರೆ ಸಂಬಂಧಿತ ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ.ರೇ, ಮನೋಜ್ ರಾಜನ್ ಸಭೆಯಲ್ಲಿ ಪಾಲ್ಗೊಂಡಿದ್ದರು.  

ಅಧ್ಯಯನಕ್ಕೆ ಸೂಚನೆ

‘ಇಷ್ಟು ವರ್ಷಗಳ ಕಾಲ ಕಾಡಾನೆಗಳ ಹಾವಳಿಯೇ ಇಲ್ಲದಿದ್ದ ಪ್ರದೇಶಗಳಲ್ಲೂ ಈಗ ಆನೆಗಳ ಉಪಟಳ ಹೆಚ್ಚಾಗಿದೆ. ಯಾವ ಕಾರಣದಿಂದ ಸಂಘರ್ಷ ವಿಸ್ತರಣೆ ಆಗುತ್ತಿದೆ ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಿ’ ಎಂದು ಈಶ್ವರ ಖಂಡ್ರೆ ತಿಳಿಸಿದರು.

ರಾಜ್ಯದೆಲ್ಲೆಡೆ ಮಳೆಯಾಗುತ್ತಿದೆ. ಕೆರೆ ಕಟ್ಟೆಗಳು ತುಂಬಿವೆ. ಕಾಡಿನಲ್ಲಿ ಹುಲ್ಲು ಸೊಪ್ಪು ತೊಗಟೆ ಲಭ್ಯವಿದ್ದರೂ ಆನೆಗಳು ನಾಡಿನತ್ತ ಏಕೆ ಬರುತ್ತಿವೆ ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮುಂದೆ ಈ ರೀತಿ ಅನಾಹುತ ಸಂಭವಿಸದಂತೆ ಕ್ರಮ ವಹಿಸಬೇಕು ಎಂದರು.

ಇತ್ತೀಚೆಗೆ ತಾವು ಸಭೆ ನಡೆಸಿ ವನ್ಯಜೀವಿಗಳ ಸಂರಕ್ಷಣೆ ಹಾಗೂ ವನ್ಯಜೀವಿಗಳಿಂದ ಮಾನವ ಜೀವ ಹಾನಿ ಬೆಳೆ ಹಾನಿ ಆಗದಂತೆ ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾವಲು ಕಾಯಲು ಮತ್ತು ಕಾಡಿನಂಚಿನ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲು ಏಕೀಕೃತ ಕಮಾಂಡ್ ಕೇಂದ್ರ ಸ್ಥಾಪಿಸಲು ಸೂಚಿಸಿದ್ದೆ. ಇದಕ್ಕೆ ರೂಪುರೇಷೆ ಸಿದ್ಧಪಡಿಸಿ ಯೋಜನಾ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.