ನರಸಿಂಹರಾಜಪುರ: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ ಗ್ರಾಮದಲ್ಲಿ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಅ. 5ರಂದು ಹಿಡಿಯಲು ಅರಣ್ಯ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.
ಕಳೆದ ಒಂದುವರೆ ವರ್ಷದಿಂದಲೂ ಸಂಕ್ಸೆ, ವಗಡೆ, ಕಾನೂರು, ಬಾಳೆ ಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ, ಹೊರಬೈಲು, ಚಿಟ್ಟಿಕೊಡಿಗೆ ಮುಂತಾದ ಹಳ್ಳಿಗಳಲ್ಲಿ ಈ ಒಂಟಿ ಸಲಗವು ಉಪಟಲ ನೀಡುತ್ತಿದೆ. ಹಗಲು ವೇಳೆಯಲ್ಲಿ ಕಾಡಿನಲ್ಲಿ ಅಡಗಿಕೊಳ್ಳುವ ಈ ಆನೆ ರಾತ್ರಿ ವೇಳೆ ಗ್ರಾಮಕ್ಕೆ ಬಂದು ಭತ್ತದ ಗದ್ದೆ, ಅಡಿಕೆ–ಬಾಳೆ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗಿದೆ. ಈ ಒಂಟಿ ಸಲಗ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ, ಶಾಸಕರಿಗೆ ಮನವಿ ಮಾಡಿದ್ದರು.
ಒಂಟಿ ಸಲಗ ಹಿಡಿಯಲು ಅಕ್ಟೋಬರ್ 4ರಂದು ಸಕ್ರೆ ಬೈಲಿನಿಂದ 3 ಆನೆ, ಕುಶಾಲನಗರದ ದುಬಾರೆಯಿಂದ 3 ಆನೆ ಸೇರಿ 6 ಆನೆಗಳು ಗುಡ್ಡೇಹಳ್ಳದ ಶಾಲೆ ಸಮೀಪದ ಮೈದಾನಕ್ಕೆ ಬರಲಿವೆ. ಕೊಪ್ಪ ಡಿ.ಎಫ್.ಒ. ಮಾರ್ಗದರ್ಶನದಲ್ಲಿ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಅರಣ್ಯ ಇಲಾಖೆಯವರು ಕಳೆದ 15 ದಿನದಿಂದ ಒಂಟಿ ಸಲಗ ಇರುವ ಜಾಗವನ್ನು ಪತ್ತೆ ಮಾಡುತ್ತಿದ್ದಾರೆ. ಅಕ್ಟೋಬರ್ 5ರಂದು ಬೆಳಿಗ್ಗೆಯಿಂದ ಕಾರ್ಯಾಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಆದರ್ಶ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.