ADVERTISEMENT

ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ: ಟಿ.ಡಿ.ರಾಜೇಗೌಡ

ಗುಡ್ಡೆಹಳ್ಳ ಸಂಕ್ಸೆಯಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಸಲಗ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 5:29 IST
Last Updated 6 ಅಕ್ಟೋಬರ್ 2025, 5:29 IST
<div class="paragraphs"><p> ಕಾಡಾನೆ ಸೆರೆ ಕಾರ್ಯಾಚರಣೆಯ ದೃಶ್ಯ&nbsp;&nbsp;(ಸಂಗ್ರಹ ಚಿತ್ರ)</p></div>

ಕಾಡಾನೆ ಸೆರೆ ಕಾರ್ಯಾಚರಣೆಯ ದೃಶ್ಯ  (ಸಂಗ್ರಹ ಚಿತ್ರ)

   

ನರಸಿಂಹರಾಜಪುರ: ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕ್ಸೆ, ಗುಡ್ಡೆಹಳ್ಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗದ ಸೆರೆ ಕಾರ್ಯಾಚರಣೆ ಭಾನುವಾರ ಆರಂಭಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗ ಇತ್ತೀಚೆಗೆ ವಾಹನ, ಗ್ರಾಮಸ್ಥರನ್ನೂ ಅಟ್ಟಾಡಿಸಿ ಉಪಟಳ ನೀಡುತ್ತಿತ್ತು. ಅರಣ್ಯ ಸಚಿವರನ್ನು ಭೇಟಿ ಮಾಡಿ ಸಲಗ ಸೆರೆ ಹಿಡಿಯಲು ಆದೇಶ ಮಾಡಿಸಲಾಗಿತ್ತು. ಅದರಂತೆ 6 ಆನೆಗಳನ್ನು ತರಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು ಕೊಪ್ಪ ಅರಣ್ಯ ವಿಭಾಗದ ಡಿಎಫ್ ಶಿವಶಂಕರ್ ನೇತೃತ್ವ ವಹಿಸಿಕೊಂಡಿದ್ದಾರೆ ಎಂದರು.

ADVERTISEMENT

ಅರಿವಳಿಕೆ ತಜ್ಞರು, ವಲಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದೆ. ಒಂಟಿ ಸಲಗ ಗ್ರಾಮದ ವ್ಯಾಪ್ತಿಯ ಗುಡ್ಡದ ಮೇಲೆ ಇರುವುದರಿಂದ ಅದನ್ನು ಸಮತಟ್ಟಾದ ಪ್ರದೇಶದ ಕಡೆ ಕರೆ ತರುವ ಪ್ರಯತ್ನ ಮಾಡಲಾಗಿದೆ ಎಂದರು.

ಹಿಂದೆ ಎಲೆಮಡ್ಲು, ಅಂಡುವಾನೆ, ಮಡಬೂರು ಗ್ರಾಮಗಳಲ್ಲಿ ಒಂಟಿ ಸಲಗ ಸೆರೆ ಹಿಡಿಯಲಾಗಿತ್ತು. ಕೊರಲು ಕೊಪ್ಪ ಭಾಗದಲ್ಲಿ 1, ಕೊಪ್ಪ ಭಾಗದಲ್ಲಿ 2 ಹಾಗೂ ಶೃಂಗೇರಿ ಭಾಗದ 2 ಕಾಡಾನೆಗಳು ಉಪಟಳ ನೀಡುತ್ತಿದ್ದು, ಇವುಗಳನ್ನು ಕಾಡಿಗೆ ಓಡಿಸುವ ಪ್ರಯತ್ನ ಮಾಡಲಾಗಿದೆ. ಇವುಗಳ ಉಪಟಳ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಅವುಗಳನ್ನೂ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಡಾನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ರೈಲ್ವೆ ಬ್ಯಾರಿಕೇಡ್ ಮತ್ತು ಟೆಂಟಕಲ್ ಬೇಲಿ ಅಳವಡಿಸುವ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಒಪ್ಪಿಗೆ ಸಿಗಲಿದೆ ಎಂದರು.

ಮಳೆ ಕಡಿಮೆಯಾದ ಕೂಡಲೇ ರಸ್ತೆಯ ಗುಂಡಿ ಮುಚ್ಚಲು ಹಾಗೂ ರಸ್ತೆ ಸಂಪೂರ್ಣ ಶಿಥಿಲವಾದ ಕಡೆ ಮರುಡಾಂಬರೀಕರಣ ಮಾಡಲು ನಿರ್ಧರಿಸಲಾಗಿದೆ. ಮಳೆಗಾಲದಲ್ಲಿ 2ಬಾರಿ ವೆಟ್ ಮಿಕ್ಸ್ ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚಲಾಗಿತ್ತು. ನಕ್ಸಲ್ ಪ್ಯಾಕೇಜ್‌ನಡಿ ₹7ಕೋಟಿ, ಅತಿವೃಷ್ಟಿ ಹಾನಿಗೆ ₹16ಕೋಟಿ, ಎಸ್‌ಎಚ್‌ಜಿಪಿಯಿಂದ ₹80ಕೋಟಿ, ಮುಖ್ಯಮಂತ್ರಿಯ ವಿಶೇಷ ಅನುದಾನದಿಂದ ₹50ಕೋಟಿ ರಸ್ತೆ ಅಭಿವೃದ್ಧಿಗೆ ಅನುದಾನ ತರಲಾಗಿದೆ. ಕೊಪ್ಪದಿಂದ ನರಸಿಂಹರಾಜಪುರ ತಾಲ್ಲೂಕಿನ ಕೊರಲುಕೊಪ್ಪ ಗ್ರಾಮವರೆಗೆ ರಸ್ತೆ ಅಭಿವೃದ್ಧಿಗೆ ₹19ಕೋಟಿ, ವಸ್ತಾರೆಯಿಂದ ಶೃಂಗೇರಿ ರಸ್ತೆ ಅಭಿವೃದ್ಧಿಗೆ ₹95ಕೋಟಿ, ಕೊಪ್ಪ ಜಯಪುರ ರಸ್ತೆಗೆ ₹18ಕೋಟಿ ಬಿಡುಗಡೆಯಾಗಿದೆ. 15 ಸೇತುವೆಗಳ ಅಭಿವೃದ್ಧಿಗೂ ಅನುದಾನ ಬಿಡುಗಡೆಯಾಗಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಅಧಿಕಾರದಲ್ಲಿದ್ದಾಗ ಉಪಟಳ ನೀಡುತ್ತಿದ್ದ ಒಂದು ಆನೆಯನ್ನೂ ಸೆರೆಹಿಡಿಸದವರು, ಕಾಡಾನೆ ದಾಳಿಯಿಂದ ಬೆಳೆ ಕಳೆದುಕೊಂಡವರಿಗೆ ಪರಿಹಾರ ನೀಡದವರು ಟೀಕಿಸುತ್ತಿದ್ದಾರೆ ಎಂದರು.

ಮುಖಂಡರಾದ ಸದಾಶಿವ, ಪ್ರಶಾಂತ್ ಶೆಟ್ಟಿ, ಜುಬೇದಾ, ಸುನಿಲ್ ಕುಮಾರ್, ನಾಗರತ್ನ, ಶಿವಣ್ಣ, ಗಾಂಧಿ ಗ್ರಾಮ ನಾಗರಾಜ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.