ADVERTISEMENT

ಆನೆಗಳ ಚಲನವಲನ ಡ್ರೋನ್ ಮೂಲಕ ಪತ್ತೆಹಚ್ಚಿ: ಕಾನೋಳ್ಳಿ ಚಂದ್ರಶೇಖರ್

ವಲಯ ಅರಣ್ಯಾಧಿಕಾರಿ ಮಧುಕರ್‌ಗೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 3:13 IST
Last Updated 3 ಸೆಪ್ಟೆಂಬರ್ 2025, 3:13 IST
ಶೃಂಗೇರಿ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಧುಕರ್‌ ಅವರಿಗೆ ಮನವಿ ಸಲ್ಲಿಸಿದರು 
ಶೃಂಗೇರಿ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಮಧುಕರ್‌ ಅವರಿಗೆ ಮನವಿ ಸಲ್ಲಿಸಿದರು    

ಶೃಂಗೇರಿ: ‘ತಾಲ್ಲೂಕಿನ ಸುತ್ತಮುತ್ತ ಆನೆ, ಕಾಡುಕೋಣ ಮತ್ತು ಇನ್ನಿತರೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯವರು ಅವುಗಳನ್ನು ನಿಯಂತ್ರಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾನೋಳ್ಳಿ ಚಂದ್ರಶೇಖರ್ ಹೇಳಿದರು.

ಶೃಂಗೇರಿ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ತಾಲ್ಲೂಕು ರೈತ ಸಂಘದವರು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

‘ಕಾಡಾನೆಗಳು ಬಾಳೆ, ಅಡಿಕೆ, ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆಗೆ ಹಾನಿ ಉಂಟು ಮಾಡುತ್ತಿದ್ದು, ಇದರಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ. ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು, ರೈತರು ಕೃಷಿ ಜಮೀನುಗಳಿಗೆ ಓಡಾಡಲು ಕಷ್ಟ ಪಡುವಂತಾಗಿದೆ. ಆದ್ದರಿಂದ ಆನೆಗಳ ಚಲನ–ವಲನಗಳನ್ನು ಡ್ರೋನ್ ಮೂಲಕ ಪತ್ತೆಹಚ್ಚಿ ಸಾರ್ವಜನಿಕರಿಗೆ ಧ್ವನಿ ವರ್ಧಕಗಳ ಮೂಲಕ ತಿಳಿಸಬೇಕು’ ಎಂದರು.

ADVERTISEMENT

ರೈತ ಸಂಘದ ಕೆಲವಳ್ಳಿ ಗುಂಡಪ್ಪ ಮಾತನಾಡಿ, ‘ಆನೆಗಳಿಂದ ರೈತರಿಗೆ ತೊಂದರೆಯಾದರೆ, ಅರಣ್ಯ ಇಲಾಖೆಯೇ ನೇರ ಹೊಣೆ. ಇತ್ತೀಚಿಗೆ ಕಾಡುಕೋಣಗಳಿಂದಲೂ ಬೆಳೆಗಳಿಗೆ ಹಾನಿ ಉಂಟಾಗುತ್ತಿದ್ದು, ರೈತರು ಬೇಸತ್ತಿದ್ದಾರೆ. ಕಾಡುಕೋಣಗಳ ಹಾವಳಿ ತಡೆಗಟ್ಟಲು ರೈತರು ಮಾಡುವ ಬೇಲಿಗಳಿಗೆ ಸಹಾಯಧನ ನೀಡಬೇಕು. ಇವುಗಳನ್ನು ನಿಯಂತ್ರಿಸುವುದರ ಜೊತೆಗೆ ರೈತರ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

‘18 ದಿನಗಳ ಹಿಂದೆ ಎರಡು ಆನೆಗಳು ತಾಲ್ಲೂಕಿನಲ್ಲಿ ಕಾಣಿಸಿದ್ದವು. ಅವುಗಳನ್ನು ಕಾಡಿಗೆ ಓಡಿಸಲಾಗಿದೆ. 5 ದಿನಗಳಿಂದ ಒಂದು ಪುಂಡಾನೆಯು ಅಡ್ಡಗದ್ದೆ, ಕಾವಡಿ, ಚಿತ್ರವಳ್ಳಿ, ಕೆಳಕೊಪ್ಪ, ಹಿಂಬ್ರವಳ್ಳಿ, ಹೊಳೆಕೊಪ್ಪ ಭಾಗದಲ್ಲಿ ಕಾಣಿಸಿಗೊಂಡಿದ್ದರಿಂದ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಆ ಭಾಗದಲ್ಲಿ ತೋಟ ಮತ್ತು ಗದ್ದೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಗೆ ಕಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಆನೆ ಕಾರ್ಯ ಪಡೆಯವರು ಆನೆ ಸಂಚಾರದ ಚಲನವಲನದ ಬಗ್ಗೆ ಗಮನ ಹರಿಸಿದ್ದಾರೆ. ಆನೆ ಸಂಚರಿಸುವ ಪ್ರದೇಶಗಳ ಶಾಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಮಧುಕರ್ ಹೇಳಿದರು.

ರೈತ ಸಂಘ ಬಂಡ್ಲಪುರ ಶ್ರೀಧರ್ ರಾವ್, ಉಳುವಳ್ಳಿ ಪೂರ್ಣೇಶ್, ಚೆನ್ನಕೇಶವ ಮೆಣಸೆ, ಅನಂತಯ್ಯ, ಗಿಣಿಕಲ್ ಚಂದ್ರಶೇಖರ್, ಸತೀಶ್ ಮೀಗಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.