ADVERTISEMENT

Winter cold | ಮೈಕೊರೆಯುವ ಚಳಿಗೆ ನಡುಗಿದ ಕಾಫಿನಾಡು

ಬಿ.ಜೆ.ಧನ್ಯಪ್ರಸಾದ್
Published 12 ಜನವರಿ 2023, 4:54 IST
Last Updated 12 ಜನವರಿ 2023, 4:54 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಚಳಿಯಲ್ಲಿ ಬಿಸಿ ಕಾಫಿ ಹೀರಿದ ಗ್ರಾಹಕರು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಚಳಿಯಲ್ಲಿ ಬಿಸಿ ಕಾಫಿ ಹೀರಿದ ಗ್ರಾಹಕರು. ಎ.ಎನ್‌.ಮೂರ್ತಿ/ಪ್ರಜಾವಾಣಿ ಚಿತ್ರ   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆಲದಿನಗಳಿಂದ ಉಷ್ಣಾಂಶ ಕುಸಿದಿದ್ದು, ಮೈ ಕೊರೆಯುವ ಚಳಿ ಕಾಡುತ್ತಿದೆ. ಚಳಿಗೆ ಹೆದರಿ ಬಹಳಷ್ಟು ಜನರು ಬೆಳಿಗ್ಗೆ ಹಾಗೂ ಇಳಿಸಂಜೆಯ ವಿಹಾರವನ್ನು (ನಡಿಗೆ) ನಿಲ್ಲಿಸಿದ್ದಾರೆ.

ಜಿಲ್ಲೆಯ ಮಲೆನಾಡು ಮತ್ತು ಬಯಲುಸೀಮೆ ಎರಡೂ ಕಡೆ ಚಳಿಯ ತೀವ್ರತೆ ಹೆಚ್ಚಿದೆ. ಮೂಡಿಗೆರೆಯಲ್ಲಿ ಎರಡು ದಿನಗಳ ಹಿಂದೆ ಕನಿಷ್ಠ 7.2 ಡಿಗ್ರಿ ಸೆಲ್ಸಿಯಸ್‌, ಬಯಲುಸೀಮೆ ಭಾಗದ ಕಡೂರಿನಲ್ಲಿ 10.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ಹೆಚ್ಚಿನ ಚಳಿ ಇದ್ದು, ಚಳಿಯಿಂದ ರಕ್ಷಣೆ ಪಡೆಯಲು ಜನರು ಸ್ವೆಟರ್‌, ಟೋಪಿಗಳ ಮೊರೆ ಹೋಗಿದ್ದಾರೆ. ಜಿಲ್ಲಾ ಆಟದ ಮೈದಾನ ಸಹಿತ ವಿವಿಧೆಡೆ ನಿತ್ಯ ನೂರಾರು ಮಂದಿ ಬೆಳಿಗ್ಗೆ, ಸಂಜೆ ನಡೆಯಲು ಬರುತ್ತಾರೆ. ಆದರೆ, ಚಳಿ ತೀವ್ರವಾದಾಗಿನಿಂದ ವಿಹಾರಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಥರಗುಟ್ಟುವ ಚಳಿಯಿಂದ ರಕ್ಷಣೆ ಪಡೆಯಲು ಕೆಲವರು ಬೆಳಗಿನ ವೇಳೆ ಬೀದಿ ಬದಿಯಲ್ಲಿ ಕಾಗದ–ಪ್ಲಾಸ್ಟಿಕ್‌, ತರಗೆಲೆ ಗುಡ್ಡೆಮಾಡಿ ಬೆಂಕಿ ಹೊತ್ತಿಸಿ, ದೇಹ ಬೆಚ್ಚಗೆ ಮಾಡಿಕೊಳ್ಳುತ್ತಾರೆ.

ADVERTISEMENT

ನಗರದ ಆಜಾದ್‌ ಪಾರ್ಕ್ ವೃತ್ತ (ಪಿಡಬ್ಲ್ಯುಡಿ ಕಚೇರಿ ಸಮೀಪ), ಟೌನ್‌ ಕ್ಯಾಂಟೀನ್‌ ವೃತ್ತದ ಭಾಗದಿಂದ ಪ್ರತಿನಿತ್ಯ ಬೆಳಿಗ್ಗೆ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ತೆರಳುತ್ತಾರೆ. ಬೆಳಗಿನ ಚುಮು ಚುಮು ಚಳಿ, ತಣ್ಣನೆ ಗಾಳಿ ವಾತಾವರಣದಲ್ಲಿ ವಾಹನಗಳಲ್ಲಿ ತೆರಳಬೇಕು.

‘ವಾರದಿಂದ ಚಳಿ ಹೆಚ್ಚಾಗಿದೆ. ಗಿರಿಶ್ರೇಣಿಯಲ್ಲಿ ವಿಪರೀತ ಚಳಿ ಇರುತ್ತದೆ. ಶೀತ ವಾತಾವರಣದಲ್ಲಿ ತೋಟಗಳಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಸ್ವೆಟರ್‌ ಧರಿಸಿ, ತಲೆಗೆ ಬಟ್ಟೆ ಕಟ್ಟಿಕೊಂಡು ಕೆಲಸಕ್ಕೆ ಹೋಗುತ್ತೇವೆ’ ಎಂದು ಕಾರ್ಮಿಕ ಮಹಿಳೆ ರಂಗಮ್ಮಹೇಳಿದರು.

ಕೆಲವರು ಶೀತ, ಜ್ವರ, ಕೆಮ್ಮು ಆಗಿ ಚಿಕಿತ್ಸೆ ಪಡೆದಿದ್ದಾರೆ. ಶ್ವಾಸಕೋಶ ಸಮಸ್ಯೆ ಇರುವವರಿಗೆ ತಂಪಾದ ವಾತಾವರಣ ಆತಂಕ ಮೂಡಿಸಿದೆ. ‘ಶೀತ, ಕೆಮ್ಮು ಇವೆಲ್ಲ ಕಾಡುವುದು ಮಾಮೂಲಿ. ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಚಳಿಯಿಂದಾಗಿ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಪ್ರಕರಣಗಳು ಇಲ್ಲ’ ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.