ಪ್ರಾತಿನಿಧಿಕ ಚಿತ್ರ
ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಹುಣಸೆಹಳ್ಳಿ ಹ್ಯಾರಂಬಿ ಪುರದ ನಾಗೇಶಗೌಡ ಎಂಬುವರ ಕಾಫಿ ತೋಟದಲ್ಲಿ ಆನೆ ದಾಳಿಯಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಗ್ರಾಮದ ಯಲ್ಲಪ್ಪ (45) ಮೃತಪಟ್ಟಿದ್ದು, ರೈತ ಸಂಘಟನೆಗಳು, ವಿವಿಧ ಮುಖಂಡರು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಭಾನುವಾರ ಹಾವೇರಿಯಿಂದ ಹೊರಟು ಹ್ಯಾರಂಬಿ ಪುರದ ನಾಗೇಶಗೌಡರ ಮನೆಗೆ ಕೆಲಸಕ್ಕಾಗಿ ರಾತ್ರಿ ವೇಳೆ ತೆರಳುತ್ತಿದ್ದಾಗ ಆನೆ ದಾಳಿ ನಡೆಸಿದೆ ಎನ್ನಲಾಗಿದೆ. ಬೆಳಿಗ್ಗೆ ಕಾಫಿ ತೋಟದ ದಾರಿಯಲ್ಲಿ ನೋಡಿದಾಗ ಆಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಕಂಡು ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ತರಾತುರಿಯಲ್ಲಿ ಯಲ್ಲಪ್ಪ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದರು.
ವಿಷಯ ತಿಳಿಯುತ್ತಿದ್ದಂತೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಸದಸ್ಯರು ಹಾಗೂ ವಿವಿಧ ಮುಖಂಡರು ಬಾಳೆಹೊನ್ನೂರಿನ ಅರಣ್ಯ ಇಲಾಖೆ ಕಚೇರಿ ಎದುರು ಸೇರಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಟಿ.ಡಿ.ರಾಜೇಗೌಡರ ವಿರುದ್ದ ಘೋಷಣೆ ಕೊಗಿದ ಪ್ರತಿಭಟನಾಕಾರರು, ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು.
ಮುಖಂಡ ಅಭೀಷೇಕ್ ಹೊಸಳ್ಳಿ ಮಾತನಾಡಿ, ‘ಇದೊಂದು ವ್ಯವಸ್ಥಿತ ಕೊಲೆ. ಈಗಾಗಲೇ ಖಾಂಡ್ಯ ಹೋಬಳಿಯಲ್ಲಿ ಕಳೆದ ಆರು ತಿಂಗಳಲ್ಲಿ 3 ಜನ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಒಬ್ಬ ಕಾರ್ಮಿಕ ಹಾಸಿಗೆ ಹಿಡಿದಿದ್ದಾರೆ. ಪ್ರತಿ ಬಾರಿ ಆನೆ ದಾಳಿಯಾದಗಲೂ ಅಧಿಕಾರಿಗಳು ಆಶ್ವಾಸನೆ ಕೊಟ್ಟು ಹೋದರೆ ವಾಪಸ್ ಬರುವುದು ಇನ್ನೊಂದು ಹೆಣ ಬಿದ್ದಾಗಲೇ. ಇಂತಹ ನಾಟಕ ಸಾಕು. ಸಮಸ್ಯೆಗೆ ಅಂತಿಮ ಪರಿಹಾರ ಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿಯ ನಾಗೇಶ್ ಮಾತನಾಡಿ, ‘ಶೃಂಗೇರಿ ಕ್ಷೇತ್ರದಲ್ಲಿ ಆನೆ ದಾಳಿಯಿಂದ ಈವರೆಗೆ 9 ಜನ ಮೃತಪಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಹ್ಯಾರಂಬಿ ಭಾಗದಲ್ಲಿ ಮೂರು ಆನೆಗಳ ಹಾವಳಿ ಕುರಿತು ಶಾಸಕರು, ಅಧಿಕಾರಿಗಳಿಗೆ ಸ್ಥಳೀಯರು ತಿಂಗಳ ಹಿಂದೆಯೇ ಮನವಿ ನೀಡಿದ್ದರೂ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.
ರಂಜಿತ್ ಶೃಂಗೇರಿ ಮಾತನಾಡಿ, ‘ಪ್ರಾಣಿ ದಾಳಿಯಿಂದ ಯಾರಾದರೂ ಸತ್ತಾಗ ಚೆಕ್ ಕೊಡುವ ಬದಲು ಆನೆಗಳು ಗ್ರಾಮಕ್ಕೆ ಬಾರದಂತೆ ರೈಲ್ವೆ ಬ್ಯಾರೀಕೆಡ್ ಅಳವಡಿಸಿ ಶಾಶ್ವತ ಪರಿಹಾರ ರೂಪಿಸಿ’ ಎಂದು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ದಯಾಮ್ ಭೇಟಿ ನೀಡಿ ಪ್ರತಿಭಟನಾಕಾರ ಜತೆ ಮಾತನಾಡಿದರು. ಮುಂದಿನ ಹತ್ತು ದಿನಗಳಲ್ಲಿ ಜಿಲ್ಲಾಧಿಕಾರಿ, ಅರಣ್ಯ ಇಲಾಖೆ ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಅವರು ಭರವಸೆ ನೀಡಿದರು. ಬಳಿಕ ಸ್ಥಳೀಯರು ಪ್ರತಿಭಟನೆ ಕೈಬಿಟ್ಟರು. ಸ್ಥಳಕ್ಕೆ ಬಿಜೆಪಿ ಮುಖಂಡ ಡಿ.ಎನ್.ಜೀವರಾಜ್ ಭೇಟಿ ನೀಡಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್, ಡಿವೈಎಸ್ಪಿ ಬಾಲಾಜಿ ಸಿಂಗ್ ಬಂದೂಬಸ್ತ್ ಕೈಗೊಂಡಿದ್ದರು. ಕೊಪ್ಪ ಡಿಎಫ್‌ಒ ಶಿವಶಂಕರ್, ಮುಖಂಡರಾದ ಟಿ.ಎಂ.ಉಮೇಶ್, ಕಿಚ್ಚಬ್ಬಿ ಪ್ರದೀಪ್, ನವೀನ್ ಕರಗಣೆ, ಮಾಗಲು ಪ್ರೇಮೇಶ್, ಭಾಸ್ಕರ್ ವೆನಿಲ್ಲಾ, ಬಿ.ಜಗದೀಶ್ಚಂದ್ರ, ರತ್ನಾಕರ ಗಡಿಗೇಶ್ವರ, ದೀಪಕ್ ಕೊಳಲೆ, ಕಿಬ್ಳಿ ಪ್ರಸನ್ನ ಭಾಗವಹಿಸಿದ್ದರು.
ಆನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು ತರಾತುರಿಯಲ್ಲಿ ಯಲ್ಲಪ್ಪ ಅವರನ್ನು ಖಾಸಗಿ ಅಂಬುಲೆನ್ಸ್ ಮೂಲಕ ಶಿವಮೊಗ್ಗಕ್ಕೆ ಸಾಗಿಸಿದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದರೆ ಯಲ್ಲಪ್ಪ ಅವರು ಬದುಕುಳಿಯುವ ಸಾಧ್ಯತೆ ಇತ್ತು. ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸದೆ ನೇರವಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲು ಕಾರಣವೇನು, ತಕ್ಷಣ ಚಿಕಿತ್ಸೆ ದೊರೆತಿದ್ದರೆ ಬದುಕುಳಿಯುವ ಸಾಧ್ಯತೆ ಇತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಅಧಿಕಾರಿಗಳು ಇದರಲ್ಲಿ ಸಂಚು ರೂಪಿಸಿದ್ದಾರೆ. ಪ್ರಾಣಿಗಳ ನಿಯಂತ್ರಣ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ನಾವೇ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ’ ಎಂದು ಗೋರಿಗಂಡಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.