ADVERTISEMENT

19 ಆರೋಪಿಗಳ ಶೋಧ ಬಾಕಿ

ಶೃಂಗೇರಿ ಬಾಲಕಿ‌ ಸತತ ಅತ್ಯಾಚಾರ ಪ್ರಕರಣ

ಬಿ.ಜೆ.ಧನ್ಯಪ್ರಸಾದ್
Published 2 ಮಾರ್ಚ್ 2021, 4:39 IST
Last Updated 2 ಮಾರ್ಚ್ 2021, 4:39 IST
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ   

ಚಿಕ್ಕಮಗಳೂರು: ‌ಜಿಲ್ಲೆಯ ಶೃಂಗೇರಿ ತಾಲ್ಲೂಕಿನ 15 ವರ್ಷದ ಬಾಲಕಿಯ ಸತತ ಅತ್ಯಾಚಾರ ಪ್ರಕರಣದ ಆರೋಪಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಈವರೆಗೆ 31 ಮಂದಿ ಬಂಧಿಸಲಾಗಿದ್ದು, ಇನ್ನು 19 ಆರೋಪಿಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಎನ್‌.ಶ್ರುತಿ ಪ್ರಕರಣದ ತನಿಖೆ ನೇತೃತ್ವ ವಹಿಸಿದ್ದು, ನಾಲ್ಕು ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ಒಂದು ತಿಂಗಳಲ್ಲಿ 31 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದವರು ಪತ್ತೆಯಾದರೆ ಬಂಧಿತರ ಸಂಖ್ಯೆ ಬರೋಬ್ಬರಿ ಅರ್ಧಶತಕ ತಲುಪಲಿದೆ.

ಊರು ಬಿಟ್ಟಿರುವವರ ಶೋಧ ಕಾರ್ಯಾಚರಣೆ: ಪ್ರಕರಣ ಬೆಳಕಿಗೆ ಬಂದ ನಂತರ ಶೃಂಗೇರಿ ಭಾಗದಲ್ಲಿ ಹಲವರು ಊರು ಬಿಟ್ಟಿದ್ದಾರೆ. ಈ ಪೈಕಿ ಬಹುತೇಕರು ಬಂಧಿತ ಆರೋಪಿಗಳ ಆಪ್ತ ಒಡನಾಟದಲ್ಲಿದ್ದವರು.

ADVERTISEMENT

ಊರು ಬಿಟ್ಟಿರುವವರ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಅಡಗಿಕೊಂಡಿದ್ದ ಕೆಲವರನ್ನು ಹಿಡಿದು ಕರೆ ತಂದಿದ್ದಾರೆ.

ಆರೋಪಿಗಳ ಫೋನ್‌ ಕಾಲ್‌ ಡಿಟೇಲ್ಸ್‌, ಫೇಸ್ಬುಕ್‌ ಖಾತೆ ಮತ್ತು ವ್ಯಾಟ್ಸ್‌ ಆ್ಯಪ್‌ನಲ್ಲಿನ ವಿಡಿಯೋ, ಫೋಟೊ, ಸಂದೇಶ ಮೊದಲಾದವು ಕೃತ್ಯದಲ್ಲಿ ಅವರ ಪಾತ್ರದ ಕೆಲ ಸುಳಿವು ನೀಡಿವೆ. ಜಾಡು ಪತ್ತೆಗೂ ನೆರವಾಗಿವೆ.

ಪುರುಷತ್ವ ಪರೀಕ್ಷೆ: ಲೈಂಗಿಕ ದೌರ್ಜನ್ಯದ ಆರೋಪ ಇರುವವರಿಗೆ ಪುರುಷತ್ವ ಪರೀಕ್ಷೆ ಮಾಡಿಸಲಾಗಿದೆ. ಪರೀಕ್ಷೆ ಮಾಡಿಸಿರುವವರೆಲ್ಲರಿಗೂ ಪುರುಷತ್ವ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಬಂಧಿಸಲಾಗಿರುವ ಆರೋಪಿಗಳನ್ನು ಬಾಲಕಿಯು ಗುರುತಿಸಿರುವುದಾಗಿ, ಇನ್ನು 19 ಆರೋಪಿಗಳ ಹೆಸರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.