ADVERTISEMENT

ಚಿಕ್ಕಮಗಳೂರು: ಸಭೆಗೆ ಹಾಜರಾಗಲು ಪಕ್ಷದ ಸದಸ್ಯರಿಗೆ ಪತ್ರ

ರಾಜೀನಾಮೆಗೆ ಪಕ್ಷದ ಸೂಚನೆ: ಸಂದಿಗ್ಧತೆ ನಡುವೆ ಜಿ.ಪಂ. ಅಧ್ಯಕ್ಷೆ ಕಸರತ್ತು

ಬಿ.ಜೆ.ಧನ್ಯಪ್ರಸಾದ್
Published 26 ಅಕ್ಟೋಬರ್ 2020, 19:30 IST
Last Updated 26 ಅಕ್ಟೋಬರ್ 2020, 19:30 IST
ಸುಜಾತಾ ಕೃಷ್ಣಪ್ಪ
ಸುಜಾತಾ ಕೃಷ್ಣಪ್ಪ   

ಚಿಕ್ಕಮಗಳೂರು: ರಾಜೀನಾಮೆಗೆ ಪಕ್ಷ ಸೂಚನೆ ನೀಡಿರುವ ಸಂದಿಗ್ಧದ ನಡುವೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರು ಸಾಮಾನ್ಯ ಸಭೆ ನಡೆಸುವ ಸಾಹಸಕ್ಕೆ ಮತ್ತೆ ಕೈ ಹಾಕಿದ್ದಾರೆ. ಸಭೆಗೆ ಹಾಜರಾಗುವಂತೆ ಕೋರಿ ಪಕ್ಷದ ಸದಸ್ಯರಿಗೆ ಪತ್ರ ಬರೆದಿದ್ದಾರೆ.

ಇದೇ 20ರಂದು ಆಯೋಜಿಸಿದ್ದ ಸಾಮಾನ್ಯ ಸಭೆ ಕೋರಂ ಕೊರತೆಯಿಂದಾಗಿ ‘ಬರಖಾಸ್ತ್‌’ ಆಗಿತ್ತು. ಅಧ್ಯಕ್ಷರ ಹೊರತಾಗಿ, ಆಡಳಿತ ಪಕ್ಷ ಬಿಜೆಪಿಯ ಒಬ್ಬ ಸದಸ್ಯರೂ ಹಾಜರಾಗಿರಲಿಲ್ಲ. ಸಭೆಯನ್ನು ನ.2ಕ್ಕೆ ಮುಂದೂಡಿರುವುದಾಗಿ ಸುಜಾತಾ ಪ್ರಕಟಿಸಿದ್ದರು. ಮುಂದಿನ ಸಭೆಗೆ ಹಾಜರಾಗುವಂತೆ ಪಕ್ಷದ ಸದಸ್ಯರ ಮನವೊಲಿಸಲು ಪ್ರಯತ್ನಿಸುತ್ತೇನೆ ಎಂದೂ ಹೇಳಿದ್ದರು.

ಇದೇ 22ರಂದು ಅವರು ಪಕ್ಷದ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಜಿಲ್ಲೆಯ ಅಭಿವೃದ್ಧಿ ಹಿತದೃಷ್ಟಿಯಿಂದ ಸಭೆಗೆ ಹಾಜರಾಗುವಂತೆ ಕೋರಿದ್ದಾರೆ.

ADVERTISEMENT

‘ಪಕ್ಷದ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ನನ್ನನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆಗೆ 2018ರ ಜೂ.20ರಂದು ಬಿಜೆಪಿ ಸದಸ್ಯರೆಲ್ಲರೂ ಆಯ್ಕೆ ಮಾಡಿದ್ದೀರಿ. ಅಂದಿನಿಂದ ಇಂದಿನವರೆಗೆ ತಮ್ಮೆಲ್ಲರ ಸಲಹೆ, ಸಹಕಾರದೊಂದಿಗೆ ಪಂಚಾಯತ್‌ ರಾಜ್‌ ಅಧಿನಿಯಮಕ್ಕೆ ಅನುಗುಣವಾಗಿ ಆಡಳಿತ ನಿರ್ವಹಿಸಿಕೊಂಡು ಬಂದಿದ್ದೇನೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಇದೇ 20ರಂದು ಆಯೋಜಿಸಿದ್ದ ಜಿಲ್ಲಾ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಪಕ್ಷದ ಎಲ್ಲ ಸದಸ್ಯರ ಗೈರು ಹಾಜರಿ, ಪಕ್ಷದ ನಿಯಮ ನಿರ್ದೇಶನಗಳಿಗೆ ಬದ್ಧಳಾಗಿ ಇಲ್ಲಿಯವರೆಗೂ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನನಗೆ ಆಘಾತವನ್ನುಂಟು ಮಾಡಿದೆ’ ಎಂದು ಉಲ್ಲೇಖಿಸಿದ್ದಾರೆ.

‘ನ.2ಕ್ಕೆ ಪುನಃ ಸಾಮಾನ್ಯ ಸಭೆ ನಿಗದಿಪಡಿಸಲಾಗಿದೆ. ಪಕ್ಷದ ನಿರ್ದೇಶನಗಳನ್ನು ಪಾಲಿಸಿಕೊಂಡು ಸದಸ್ಯರ ಹಾಗೂ ಜಿಲ್ಲೆಯ ಜನತೆಯ ಆಶೋತ್ತರ ಈಡೇರಿಸಲು ಕಟೀಬದ್ಧಳಾಗಿರುತ್ತೇನೆ ಎಂದು ಭರವಸೆ ನೀಡುತ್ತಾ, ಹಿಂದಿನಂತೆಯೇ ವಿಶ್ವಾಸವಿಟ್ಟು ನ.2ರ ಸಭೆಗೆ ತಾವು ಹಾಜರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಪತ್ರದಲ್ಲಿ ಕೋರಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಹಿತ ಪಕ್ಷದ ಮುಖಂಡರೆಲ್ಲರೂ ಪಕ್ಷದ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ತೀರ್ಮಾನವೇ ಅಂತಿಮ, ಸುಜಾತಾ ಅವರು ರಾಜೀನಾಮೆ ನೀಡಬೇಕು ಎಂದು ಸೂಚಿಸಿದ್ದಾರೆ. ಸಾಮಾನ್ಯ ಸಭೆ ನಡೆಸಿ ರಾಜೀನಾಮೆ ನೀಡುತ್ತೇನೆ ಎಂದು ಸುಜಾತಾ ‘ಪಟ್ಟು’ ಹಿಡಿದಿದ್ದಾರೆ.

‘ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳ ಬೇಕೇ ಬೇಡವೇ ಎಂಬ ಬಗ್ಗೆ ಪಕ್ಷದ ಸದಸ್ಯರೆಲ್ಲರೂ ಚರ್ಚಿಸಿ ತೀರ್ಮಾನಿಸುತ್ತೇವೆ. ಪಕ್ಷದ ಸೂಚನೆ ಪಾಲಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.