ADVERTISEMENT

ಅಂಗನವಾಡಿಗೆ ಹಾಸು ಬಂಡೆಯೇ ಆಶ್ರಯ!

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 5:30 IST
Last Updated 13 ಏಪ್ರಿಲ್ 2012, 5:30 IST

ಧರ್ಮಪುರ: ಗ್ರಾಮೀಣ ಪ್ರದೇಶದ ಮೂಲಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಾ ಬಂದಿದೆ. ಆದರೆ, ಆ ಅನುದಾನ ಕೆಲವೊಮ್ಮೆ ಗಡಿ ಗ್ರಾಮಗಳಿಗೆ ತಲುಪದೇ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿಯೇ ಉಳಿಯುತ್ತವೆ. ಇದಕ್ಕೆ ತಾಜಾ ಉದಾಹರಣೆ ಧರ್ಮಪುರ ಸಮೀಪದ ಕುರಿದಾಸನಹಟ್ಟಿ ಅಂಗನವಾಡಿ ಕೇಂದ್ರ.

2005-06ರಲ್ಲಿ ಇಲ್ಲಿ ಪ್ರಾರಂಭವಾದ ಅಂಗನವಾಡಿ ಕೇಂದ್ರ ಅಂದಿನಿಂದಲೂ ಕೊಠಡಿ ಇಲ್ಲದೇ ಕಾದ ಬಂಡೆಗಳ ಮೇಲೆ ನಡೆಯುತ್ತಿದೆ! ಇದರ ಮೇಲೆ ಕುಳಿತು ಎಳೆ ವಯಸ್ಸಿನ ಮಕ್ಕಳು ಕುಳಿತು ಅಕ್ಷರ ಕಲಿಯುವ ಪರಿಸ್ಥಿತಿ ಇದೆ.

ಇಲ್ಲಿ 25 ಮಕ್ಕಳು ನಿತ್ಯ ಮರವನ್ನು ಆಶ್ರಯಿಸಿದ್ದಾರೆ. ಈಗ ಬೇಸಿಗೆಯ ದಿನ ಮರದ ಎಲೆಗಳು ಉದುರಿವೆ. ಇಲ್ಲಿನ ಹಾಸು ಬಂಡೆಯ ಮೇಲೆ ಎಳೆ ಕಂದಮ್ಮಗಳು ಕುಳಿತುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ. ಮಕ್ಕಳು ಆಹಾರ ತಿಂದ ಮೇಲೆ ಮಧ್ಯಾಹ್ನ ಅವರನ್ನು ಮಲಗಿಸುವ ವ್ಯವಸ್ಥೆ ಇದೆ. ಇಲ್ಲಿಯ ಮಕ್ಕಳಿಗೆ ಕಾದ ಬಂಡೆಗಳೇ ಮಲಗುವ ಮಂಚಗಳಾಗಿವೆ!

ಚರಂಡಿ: ಇಲ್ಲಿನ ಪ್ರಕೃತಿಯ ಅಂಗನವಾಡಿ ಪಕ್ಕದಲ್ಲಿ ಕಿರು ನೀರು ಸರಬರಾಜು ಟ್ಯಾಂಕ್ ಇದೆ. ಅದರ ಪಕ್ಕದಲ್ಲಿ ಕೊಳಚೆ ನೀರು ಹರಿಯುವ ಚರಂಡಿ ಇದೆ. ಇಲ್ಲಿ ದುರ್ವಾಸನೆ ಬರುತ್ತದೆ. ಸೊಳ್ಳೆಗಳ ಕಾಟವಂತು ಹೇಳತೀರದು. ಆದರೂ ವಿಧಿಯಿಲ್ಲದೇ ಮಕ್ಕಳು ಅಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಗ್ರಾಮದ ವೀರಣ್ಣ ಮತ್ತು ಮೂಡಲಗಿರಿಯಪ್ಪ ನೊಂದು ನುಡಿಯುತ್ತಾರೆ.

ಈ ಗ್ರಾಮದಲ್ಲಿ ಗೊಲ್ಲ ಮತ್ತು ನಾಯಕ ಜನಾಂಗದವರಿದ್ದು, ಕೂಲಿ ನಂಬಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಕ್ಕೆ ಕೊಠಡಿ ಬೇಕು ಎಂದು ಕಳೆದ ಆರು ವರ್ಷಗಳಿಂದ ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳನ್ನು ಕೇಳುತ್ತಾ ಬಂದಿದ್ದೇವೆ. ಆದರೆ, ಇಲ್ಲಿಯವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿಗೆ ಬರುವ ಪೌಷ್ಟಿಕ ಆಹಾರವನ್ನು ಯಾವುದೋ ಒಂದು ಮನೆಯಲ್ಲಿ ಸಂಗ್ರಹಣೆ ಮಾಡಲಾಗಿದೆ ಎನ್ನುತ್ತಾರೆ ಸ್ಥಳೀಯರು.

ಸರ್ಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ಸರಬರಾಜು ಮಾಡಲು ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಮಕ್ಕಳ ಹಕ್ಕು ಶಿಕ್ಷಣ ಕಾಯ್ದೆ ಬಂದ ಮೇಲೆ ಅವರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಬೇಕು. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಇಲ್ಲಿನ ಜನರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.