ADVERTISEMENT

ಅಂಚೆ ಕಚೇರಿ ಅವ್ಯವಹಾರ: ತನಿಖೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 8:40 IST
Last Updated 15 ಫೆಬ್ರುವರಿ 2011, 8:40 IST

ಮೊಳಕಾಲ್ಮುರು: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಇಲಾಖೆ ಕೈಗೊಂಡಿರುವ ತನಿಖೆ ಚುರುಕು ಗೊಳಿಸಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ಗ್ರಾಹಕರು ಕಚೇರಿಯಲ್ಲಿ ಇಲಾಖೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಅವ್ಯವಹಾರ ನಡೆದಿರುವ ಬಗ್ಗೆ ಕಳೆದ 4-5 ತಿಂಗಳ ಹಿಂದೆಯೇ ಇಲಾಖೆಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಜತೆಗೆ ಇಬ್ಬರು ನೌಕರರನ್ನು ಸಹ ಅಮಾನತು ಮಾಡಿದೆ. ಅದರೆ, ಈ ಬಗ್ಗೆ ಕೈಗೊಂಡಿರುವ ತನಿಖೆ ವಿಳಂಬವಾಗುತ್ತಿರುವ ಪರಿಣಾಮ ಗ್ರಾಹಕರು ಅಗತ್ಯವಿದ್ದರೂ ಹಣ ಬಿಡಿಸದ ಮತ್ತು ಉಳಿತಾಯ ಖಾತೆಗೆ ಹಣ ತುಂಬದ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಗ್ರಾಹಕರು ದೂರಿದರು.

ಕೆಲ ಖಾತೆಗಳ ತನಿಖೆ ಮುಗಿದಿದ್ದು, ಸೂಕ್ತ ಮಾಹಿತಿ ನೀಡದೇ ಇಷ್ಟೇ ಹಣ ನಿಮ್ಮ ಖಾತೆಯಲ್ಲಿರುವುದು ಎಂದು ಹೇಳಿ ಹೊಸ ಪಾಸ್‌ಪುಸ್ತಕ ನೀಡುತ್ತಿದ್ದಾರೆ ಎಂದು ಗ್ರಾಹಕ, ನಿವೃತ್ತ ಬೆಸ್ಕಾಂ ಎಇಇ ಉದಯಶಂಕರ್ ದೂರಿದರು.ಗ್ರಾಹಕ ನರೇಂದ್ರ ಮಾತನಾಡಿ, 2009ರ ಡಿ. 21ರಂದು ` 17,995 ಮೊತ್ತದ ಚೆಕ್ ನೀಡಿದ್ದ,  ಈವರೆಗೆ ಹಣವೂ ನೀಡಿಲ್ಲ, ಚೆಕ್ ವಾಪಸ್ ಮಾಡುತ್ತಿಲ್ಲ ಎಂದು ದೂರಿದರು.ಹಲವು ತಿಂಗಳಿಂದ ಅವ್ಯವಹಾರ ನಡೆದಿರುವ ಅನುಮಾನವಿದ್ದು, ಇದನ್ನು ಲೆಕ್ಕಪತ್ರ ತಪಾಸಣೆ ಮಾಡುವ ಅಧಿಕಾರಿಗಳು ಗಮನಿಸದೇ ಇರುವುದು ಅನುಮಾನ ಮೂಡಿಸಿದೆ ಎಂದು ಅವರು ಆರೋಪಿಸಿದರು.

ವ್ಯವಸ್ಥಾಪಕ ಸುರೇಶ್ ಮಾಹಿತಿ ನೀಡಿ, ಅವ್ಯವಹಾರ ತನಿಖೆ ಕಾರ್ಯ ಶೇ. 75ರಷ್ಟು ಮುಗಿದಿದೆ. ಕೆಲ ಅಂಶ ಸ್ಪಷ್ಟಪಡಿಸಿಕೊಳ್ಳಲು ದಾಖಲೆಗಳನ್ನು ಹೈದರಾಬಾದ್‌ನ ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಈ ತಿಂಗಳ ಅಂತ್ಯಕ್ಕೆ ವರದಿ ಬರುವ ನಿರೀಕ್ಷೆ ಇದೆ. ಆದರೆ, ಎಷ್ಟು ಪ್ರಮಾಣ ಮತ್ತು ಎಷ್ಟು ಖಾತೆಗಳಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಪೂರ್ಣವಾದ ನಂತರವೇ ಇಲಾಖೆ ಬಹಿರಂಗಪಡಿಸಲಿದೆ ಎಂದು ಹೇಳಿದರು.ಶೀಘ್ರ ತನಿಖೆ ನಡೆಸಿ ಆಗಿರುವ ವ್ಯತ್ಯಾಸ ಸರಿಪಡಿಸದಿದ್ದಲ್ಲಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಗ್ರಾಹಕರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.