ADVERTISEMENT

ಅಂತರಕಾಲೇಜು ಫುಟ್‌ಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 5:20 IST
Last Updated 25 ಫೆಬ್ರುವರಿ 2012, 5:20 IST

ಹೊಳಲ್ಕೆರೆ: ಕ್ರೀಡೆಯಿಂದ ವಿಶ್ವದೆಲ್ಲೆಡೆ ದೇಶದ ಕೀರ್ತಿ ಹರಡುವ ಜತೆಗೆ ಆರ್ಥಿಕ ಪ್ರಗತಿಗೂ ಸಹಕಾರಿ ಆಗುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶುಕ್ರವಾರ ನಡೆದ ದಾವಣಗೆರೆ ವಿವಿ ಪದವಿ ಕಾಲೇಜುಗಳ ಫುಟ್‌ಬಾಲ್ ಟೂರ್ನಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

120 ಕೋಟಿ ಜನಸಂಖ್ಯೆ ಹೊಂದಿರುವ ಬೃಹತ್ ಭಾರತ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿಲ್ಲ. ಒಲಂಪಿಕ್ಸ್‌ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ಸಾಧನೆ ಅಷ್ಟೇನಿಲ್ಲ. ಇದಕ್ಕೆ ನಮ್ಮ ದೇಶದಲ್ಲಿ ಕ್ರೀಡೆಗೆ ಸಿಗದ ಮನ್ನಣೆ, ಮಾರ್ಗದರ್ಶನ, ಕ್ರೀಡಾಂಗಣಗಳು ಮತ್ತು ಹಣಕಾಸಿನ ಕೊರತೆ ಪ್ರಮುಖ ಕಾರಣ. ಕ್ರಿಕೆಟ್ ಹೊರತುಪಡಿಸಿದರೆ ಬೇರೆ ಆಟಗಳಲ್ಲಿ ನಮ್ಮ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ವಿಶ್ವಮಟ್ಟದ ಕ್ರೀಡಾಕೂಟ ಆಯೋಜಿಸಲು ಸಾಧ್ಯ ಆಗದಿರುವುದು ವಿಷಾದನೀಯ ಎಂದರು.

ಕ್ರೀಡೆಯಿಂದ ದೈಹಿಕ ಆರೋಗ್ಯದೊಂದಿಗೆ ಮನಸ್ಸು ಉಲ್ಲಸಿತವಾಗುತ್ತದೆ. ದುಶ್ಚಟಗಳಿಂದ ದೂರವಿರಲು, ಶಿಸ್ತು, ಸಮಯಪ್ರಜ್ಞೆ, ಸೃಜನಶೀಲತೆಗಳನ್ನು ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿ. ಶಾಲಾ- ಕಾಲೇಜು ಹಂತದಿಂದಲೆ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆಸಕ್ತಿ ಬೆಳೆಯುತ್ತದೆ. ದೈಹಿಕ ಶಿಕ್ಷಕರು ಕ್ರೀಡೆಯಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ಸಹಾಯಕ ಆಡಳಿತಾಧಿಕಾರಿ ಎಲ್.ಎಸ್. ಶಿವರಾಮಯ್ಯ ಕ್ರೀಡಾಕೂಟ ಉದ್ಘಾಟಿಸಿದರು. ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕ ರಾಜಕುಮಾರ್, ಶತಮಾನೋತ್ಸವ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಟಿ. ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ದಾವಣಗೆರೆ ಹೈಟೆಕ್ ಬಾಪೂಜಿ ಕಾಲೇಜು ಪ್ರಥಮ ಮತ್ತು ಚಿತ್ರದುರ್ಗದ ಎಸ್‌ಜೆಎಂ ಕಾಲೇಜು ದ್ವಿತೀಯ ಸ್ಥಾನ ಪಡೆದವು. ಉಪನ್ಯಾಸಕ ಜೆ. ರಘುನಾಥ್ ಕಾರ್ಯಕ್ರಮ ನಿರೂಪಿಸಿದರು. ಟಿ. ಲೋಕೇಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.