ಹಿರಿಯೂರು: ತಾಲ್ಲೂಕಿನ ವೇದಾವತಿ ಮತ್ತು ಸುವರ್ಣಮುಖಿ ನದಿಗಳಲ್ಲಿ ಅಕ್ರಮ ಮರಳು ತುಂಬಿ ಬೆಂಗಳೂರಿಗೆ ಸಾಗಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, ತಕ್ಷಣ ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ತಾಲ್ಲೂಕು ರೈತ ಸಂಘದ ಮುಖಂಡರು ಸೋಮವಾರ ತಹಶೀಲ್ದಾರ್‌ಗೆ ಮನವಿ ಪತ್ರ ಅರ್ಪಿಸಿದರು.
ತಾಲ್ಲೂಕಿನ ಜೀವ ನದಿಗಳಾಗಿರುವ ಇವುಗಳಲ್ಲಿ ಜೆಸಿಬಿ ಯಂತ್ರದ ಮೂಲಕ ಮರಳು ತುಂಬಿ ಸಾಗಿಸಲಾಗುತ್ತಿದೆ. ಈ ಬಗ್ಗೆ ತಾಲ್ಲೂಕು ಆಡಳಿತಕ್ಕೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ.ಹೂವಿನಹೊಳೆ ಗ್ರಾಮದ ಸಮೀಪ ಸೆಂಟ್ರಲ್ ವಾಟರ್ ಕಮೀಷನ್‌ನವರು ನೀರಿನ ಮಾಪಕ ಅಳವಡಿಸಿದ್ದು, ಮಾಪಕದಿಂದ ಒಂದು ಕಿ.ಮೀ. ಮೇಲ್ಭಾಗದಲ್ಲಿ ಹಾಗೂ ಕೆಳ ಭಾಗದಲ್ಲಿ ಮರಳು ತೆಗೆಯಬಾರದು ಎಂಬ ಆದೇಶ ಮಾಡಲಾಗಿದ್ದರೂ, ಯಂತ್ರ ಬಳಸಿ ಹತ್ತು ಅಡಿ ಆಳದವರೆಗೆ ಮರಳು ತೆಗೆಯಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಅಂತರ್ಜಲ ಕಣ್ಮರೆಯಾಗಿ ನದಿಯನ್ನೇ ನಂಬಿರುವ ಹಳ್ಳಿಗಳ ಜನರು, ದನಕರುಗಳು ತೀವ್ರ ತೊಂದರೆಗೆ ಸಿಲುಕಲಿವೆ ಎಂದು ರೈತ ಮುಖಂಡರು ಎಚ್ಚರಿಸಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಮೂರು ಅಡಿ ಆಳದವರೆಗೆ ಮರಳು ತೆಗೆಯುವುದನ್ನು ಗ್ರಾಮಸ್ಥರು ಮತ್ತು ರೈತ ಸಂಘ ವಿರೋಧಿಸುವುದಿಲ್ಲ. ಆದರೆ, 3ಅಡಿಗಿಂತ ಹೆಚ್ಚು ಆಳದವರೆಗೆ ಮರಳು ತೆಗೆದರೆ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ. ಮರಳು ಕೂಡಾ ಖಾಲಿಯಾಗುತ್ತದೆ. ತಾಲ್ಲೂಕು ಆಡಳಿತ ಪರಿಸ್ಥಿತಿಯ ಗಂಭೀರತೆ ಅರಿತು ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಗ್ರಾಮಸ್ಥರ ಜತೆಗೂಡಿ ರೈತ ಸಂಘದವರೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಮುಖಂಡರು ಎಚ್ಚರಿಸಿದರು.
ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ರೈತ ಸಂಘದವರ ಮನವಿ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ, ತುಳಸೀದಾಸ್, ಸಿದ್ಧರಾಮಣ್ಣ, ನರೇಂದ್ರ, ಹೊರಕೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯ: ಇತ್ತೀಚೆಗೆ ಬಿದ್ದ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ತಾಲ್ಲೂಕಿನ ಮಸ್ಕಲ್‌ಮಟ್ಟಿ ಗ್ರಾಮದ ಸುತ್ತಮುತ್ತ ತೆಂಗಿನ ತೋಟಗಳಿಗೆ ಹಾನಿಯಾಗಿದ್ದು, ಬೆಳೆ ಹಾನಿಯಾಗಿರುವ ರೈತರಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎ. ಕೃಷ್ಣಸ್ವಾಮಿ ಒತ್ತಾಯ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.