ADVERTISEMENT

ಅತ್ಯಧಿಕ ಅಂತರದಲ್ಲಿ ಸುಧಾಕರ್ ಗೆಲುವು ಖಚಿತ

ಹಿರಿಯೂರಿನಲ್ಲಿ ಶಾಸಕ ಜಮೀರ್ ಅಹಮದ್ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 7:08 IST
Last Updated 10 ಏಪ್ರಿಲ್ 2018, 7:08 IST

ಹಿರಿಯೂರು: ‘ಸಿ ಫೋರ್’ ಸೇರಿದಂತೆ ವಿವಿಧ ಏಜೆನ್ಸಿಗಳು ನಡೆಸಿರುವ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ಹಿರಿಯೂರನ್ನು ಪ್ರತಿನಿಧಿಸುವ ಡಿ. ಸುಧಾಕರ್ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲುವು ಪಡೆಯಲಿದ್ದಾರೆ ಎಂದು ಶಾಸಕ ಜಮೀರ್‌ ಅಹಮದ್ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಸೋಮವಾರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಸಭೆಯಲ್ಲಿ ದಲಿತರು, ಅಲ್ಪಸಂಖ್ಯಾತರು ಹೆಚ್ಚು ಕಾಣುತ್ತಿದ್ದಾರೆ. ಇವರಿಬ್ಬರ ಸಂಬಂಧ ಸ್ವಾತಂತ್ರ್ಯ ಪೂರ್ವದಿಂದಲೂ ಉಳಿದು, ಬೆಳೆದು ಬಂದಿದೆ. ಎಲ್ಲ ಬಡವರ ದನಿಯಾಗಿದ್ದ ಡಾ. ಅಂಬೇಡ್ಕರ್ ಚುನಾವಣೆಯಲ್ಲಿ ಸೋತಾಗ, ಅವರ ವಿರುದ್ಧ ಗೆಲುವು ಪಡೆದಿದ್ದ ಮುಸ್ಲಿಂ ವ್ಯಕ್ತಿ ರಾಜೀನಾಮೆ ನೀಡಲು ಮುಂದಾಗಿದ್ದ. ಬಿಜೆಪಿಯವರಿಗೆ ಮಾತ್ರ ದಲಿತರು, ಮುಸ್ಲಿಮರನ್ನು ಕಂಡರೆ ಆಗುವುದಿಲ್ಲ. ಅನಂತಕುಮಾರ್ ಹೆಗಡೆಯಂಥವರು ಸಂವಿಧಾನ ಬದಲಾಯಿಸುವುದಾಗಿ ಮಾತನಾಡುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲು ಹೊರಟಿದ್ದಾರೆ ಎಂದು ಅವರು ಆರೋಪಿಸಿದರು.

ADVERTISEMENT

‘ನನ್ನಿಂದ ಜೆಡಿಎಸ್ ಪಕ್ಷಕ್ಕೆ ಯಾವ ದ್ರೋಹವೂ ಆಗಿರಲಿಲ್ಲ. ಈ ಬಗ್ಗೆ ಪ್ರಮಾಣ ಮಾಡುತ್ತೇನೆ ಎಂದರೂ ಕುಮಾರಸ್ವಾಮಿ ಬರಲಿಲ್ಲ. ಪವಿತ್ರ ಕುರಾನ್ ಮೇಲೆ ಆಣೆ ಮಾಡುತ್ತೇನೆ ಎಂದರೂ ಅವರು ನಂಬಲಿಲ್ಲ. ಹೆಚ್ಚು ನಂಬಿಕಸ್ಥರಾದ ಒಕ್ಕಲಿಗರನ್ನೇ ಎಚ್‌ಡಿಕೆ ನಂಬುತ್ತಿಲ್ಲ. ಅಲ್ಲಿ ಯಾರೂ ನಾಯಕರಾಗಲು ಸಾಧ್ಯವಿಲ್ಲ. ಅಲ್ಕೋಡಗ ಹನುಮಂತಪ್ಪ ಜೆಡಿಎಸ್ ತೊರೆಯುತ್ತಿದ್ದಾರೆ. ಹಿರಿಯ ಮುತ್ಸದ್ದಿ ಡಿ. ಮಂಜುನಾಥ್ ಮನೆ
ಸೇರುವಂತೆ ಮಾಡಿದರು’ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಸಮುದಾಯಗಳ ನಾಯಕ. ಅವರೊಬ್ಬ ಹುಲಿ. ಅದಕ್ಕಾಗಿಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಾರೆ. ಭಯ ಇರುವ ಕಾರಣ ಎಚ್‌ಡಿಕೆ ಎರಡು ಕಡೆ ಸ್ಪರ್ಧೆ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯ
ಮಂತ್ರಿ ಆಗಬೇಕೆನ್ನುವುದು ನಾಡಿನ ಜನತೆಯ ಇಚ್ಛೆ ಎಂದು ಹೇಳಿದರು.

ಅಪ್ಪಟ ಜಾತ್ಯತೀತವಾದಿಯಾಗಿರುವ ಡಿ. ಸುಧಾಕರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು. ಜೆಡಿಎಸ್‌ಗೆ ಮತ ಹಾಕಿದರೆ ಅದು ಬಿಜೆಪಿಗೆ ಹಾಕಿದಂತೆ. ಕೋಮುವಾದಿಗಳನ್ನು ದೂರವಿಡಲು ಕಾಂಗ್ರೆಸ್ ಪಕ್ಷದ ಕೈ ಹಿಡಿಯಬೇಕು ಎಂದು ಜಮೀರ್ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ಸುಧಾಕರ್ ಮಾತನಾಡಿ, ‘ಸಂವಿಧಾನ ಬದಲಾಯಿಸಲು ಹೊರಟಿರುವವರ ಬಗ್ಗೆ ಎಚ್ಚರ ಅಗತ್ಯ. ಕ್ಷೇತ್ರದಲ್ಲಿ 10 ವರ್ಷದಲ್ಲಿ ಒಂದೇ ಒಂದು ಕೋಮುಗಲಭೆಗೆ ಆಸ್ಪದ ಕೊಟ್ಟಿಲ್ಲ. ಬಯಲು ಸೀಮೆಯ ಜನರ ಹಲವು ದಶಕಗಳ ಕನಸಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿರುವುದನ್ನು ತಾಲ್ಲೂಕಿನ ರೈತರು ಕಣ್ಣಾರೆ ನೋಡಿ ಬಂದಿದ್ದಾರೆ. ಮತ್ತೊಮ್ಮೆ ಗೆಲ್ಲಿಸುವ ಮೂಲಕ ಬಾಕಿ ಇರುವ ಅಭಿವೃದ್ಧಿ ಕಾರ್ಯಗಳನ್ನು ಮುಗಿಸಲು ಅವಕಾಶ ಕೊಡಿ’ ಎಂದು ಕೋರಿದರು.

ಡಾ. ಎಚ್.ಎಂ. ಷಕೀಲ್ ನವಾಜ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಗೀತಾ ನಾಗಕುಮಾರ್ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಹಮದ್ ಫಕೃದ್ಧೀನ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ವೇದಿಕೆಯಲ್ಲಿ ಆರ್. ನಾಗೇಂದ್ರನಾಯ್ಕ್, ಪಾಪಣ್ಣ, ಶಶಿಕಲಾ ಸುರೇಶ್ ಬಾಬು, ಅಮೃತೇಶ್ವರಸ್ವಾಮಿ, ಕಲ್ಲಟ್ಟಿ ತಿಪ್ಪೇಸ್ವಾಮಿ, ಖಾದಿರಮೇಶ್, ಸಾದತ್ ಉಲ್ಲಾ, ಅಜೀಜ್, ದಾದಾಪೀರ್, ಈರಲಿಂಗೇಗೌಡ, ನವಾಬ್ ಸಾಬ್, ಇ.ಮಂಜುನಾಥ್, ಮುಕುಂದ್, ಅಜ್ಜಣ್ಣ, ಪುರುಷೋತ್ತಮ್, ಚಂದ್ರಾನಾಯ್ಕ್, ಎಸ್.ಆರ್. ತಿಪ್ಪೇಸ್ವಾಮಿ, ಪುರುಷೋತ್ತಮ್, ವಾಸುದೇವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.