ADVERTISEMENT

ಅನಾಥೆಯ ಬದುಕಿಗೆ ಆಸರೆಯಾದ ಯುವಕ.

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 4:15 IST
Last Updated 7 ಮಾರ್ಚ್ 2011, 4:15 IST

ಚಿತ್ರದುರ್ಗ: ಅನಾಥೆಯನ್ನು ಬಾಳಸಂಗಾತಿಯಾಗಿ ಸ್ವೀಕರಿಸಿ ಮಾನವೀಯತೆ ಮೆರೆದವರಿಗೆ ರೋಟರಿ ಮತ್ತು ಅದರ ಅಂಗಸಂಸ್ಥೆಗಳು ಶನಿವಾರ ನಗರದಲ್ಲಿ ಸನ್ಮಾನ ನೀಡಿ ಗೌರವಿಸಲಾಯಿತು.ಸಭೆಯಲ್ಲಿ ನೆರೆದಿದ್ದ ಗಣ್ಯರು, ನಾಗರಿಕರು ನವಜೋಡಿಗೆ ಶುಭ ಕೋರಿದರು. ಆತ್ಮವಿಶ್ವಾಸದ ಮಾತುಗಳನ್ನಾಡಿದರು.

ಅನಾಥೆಯ ಬದುಕಿಗೆ ಆಸರೆಯಾಗಿದ್ದು ರಾಘವೇಂದ್ರ ಎಂಬ ಬ್ರಾಹ್ಮಣ ಯುವಕ. ನಗರದ ಹೊಳಲ್ಕೆರೆ ರಸ್ತೆಯ ಲಕ್ಷ್ಮೀನಾರಾಯಭಟ್ಟ ಮತ್ತು ಭಾಗೀರಥಿ ದಂಪತಿ ಪುತ್ರ ರಾಘವೇಂದ್ರ ಪಿಯು ಓದಿದ್ದು, ಅಡುಗೆ ಕೆಲಸ ಮಾಡುತ್ತಾರೆ. ಇಲ್ಲಿನ ಸರ್ಕಾರೇತರ ಸಂಸ್ಥೆಯಾದ ರಾಜಲಕ್ಷ್ಮೀ ಅಸೋಸಿಯೇಷನ್‌ನ ಅನಾಥಾಶ್ರಮದ ರಾಜಶೇಖರ್ ಬಳಿ ಅನಾಥೆಯನ್ನು ಮದುವೆ ಆಗುವ ಇಂಗಿತ ವ್ಯಕ್ತಪಡಿಸಿದ್ದರು.

ಶಿವಮೊಗ್ಗ ಜಿಲ್ಲೆಯ ಹಳ್ಳಿಯೊಂದರಿಂದ 2009ರಲ್ಲಿ ಆಗಮಿಸಿ ಅಸೋಸಿಯೇಷನ್‌ನ ಈ ಅನಾಥಾಶ್ರಮ ಸೇರಿದ್ದ ಅನಾಥೆ ರುಕ್ಮಿಣಿಗೆ ರಾಜಶೇಖರ್ ಈ ವಿಷಯ ತಿಳಿಸಿದರು. ಅನಕ್ಷರಸ್ಥಳಾದ ರುಕ್ಮಿಣಿ ಮದುವೆಗೆ ಸಮ್ಮತಿ ಸೂಚಿಸಿದಾಗ ರಾಘವೇಂದ್ರನಿಗೆ ಈ ವಿಷಯ ತಿಳಿಸಿದರು. ನಂತರ ಅವರ ಕುಟುಂಬದವರೆಲ್ಲರೂ ಒಪ್ಪಿಕೊಂಡಾಗ ಫೆ. 27ರಂದು ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದ ಶಾರದಾಭವನದಲ್ಲಿ ರಾಘವೇಂದ್ರ-ರುಕ್ಮಿಣಿಯ ವಿವಾಹ ನಡೆದಿತ್ತು.

‘ಇಂತಹ ಐದಾರು ಮದುವೆಗಳನ್ನು ಈ ಹಿಂದೆ ಸಂಸ್ಥೆ ಮಾಡಿಸಿದೆ. ಮದುವೆಗೆ ತಗುಲುವ ಖರ್ಚು ವೆಚ್ಚವನ್ನೆಲ್ಲಾ ನಾವೇ ಭರಿಸಿದ್ದೇವೆ. ಆದರೆ, ಈ ಮದುವೆಗೆ ತಗುಲಿದ ಅಷ್ಟೂ ಖರ್ಚನ್ನು ರಾಘವೇಂದ್ರನ ಕುಟುಂಬವೇ ಭರಿಸಿದೆ’ ಎಂದು ರಾಜಶೇಖರ್ ತಿಳಿಸಿದರು.

ಅಂದು ಮದುವೆಗೆ ಹಾಜರಾದ ಕಾಂಗ್ರೆಸ್ ಮುಖಂಡರಾದ ಮಹಡಿ ಶಿವಮೂರ್ತಿ, ಆರತಿ ಮಹಡಿ ಶಿವಮೂರ್ತಿ ಈ ಆದರ್ಶ ಜೋಡಿಗೆ ಹಾಗೂ ಇದಕ್ಕೆ ಕಾರಣರಾದ ಅಸೋಸಿಯೇಷನ್‌ನ ರಾಜಶೇಖರ್ ಅವರನ್ನು ಸನ್ಮಾನಿಸುವ ಆಲೋಚನೆ ಮೂಡಿತು.

ಇನ್ನರ್‌ವ್ಹೀಲ್ ಕ್ಲಬ್, ಇನ್ನಿತರ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿಸಿದ್ದರು.ತಹಶೀಲ್ದಾರ್ ಕುಮಾರಸ್ವಾಮಿ, ರೋಟರಿ ಅಧ್ಯಕ್ಷ ವೀರಭದ್ರಸ್ವಾಮಿ, ಇನ್ನರ್‌ವ್ಹೀಲ್ ಪೋರ್ಟ್ ಅಧ್ಯಕ್ಷೆ ಸೌಮ್ಯ ರವಿಶಂಕರ್, ರೋಟರಿ ಫೋರ್ಟ್‌ನ ಆರ್. ಮಂಜುನಾಥ್, ಬ್ರಹ್ಮಾನಂದ ಗುಪ್ತಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.