ADVERTISEMENT

ಅನಿಲ ಪೈಪ್‌ಲೈನ್: ಪರಿಹಾರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 10:34 IST
Last Updated 18 ಜೂನ್ 2013, 10:34 IST

ಚಿತ್ರದುರ್ಗ: ಅನಿಲ ಪೈಪ್‌ಲೈನ್ ಅಳವಡಿಕೆಯಿಂದ ಹಾನಿಗೀಡಾದ ರೈತರಿಗೆ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಕಿಸಾನ್ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ತಾಲ್ಲೂಕಿನ ಜಿ.ಆರ್. ಹಳ್ಳಿ ಬಳಿ ದಾಬೋಲ್- ಬೆಂಗಳೂರು ಅನಿಲ ಪೈಪ್‌ಲೈನ್ ಅನ್ನು ಅವೈಜ್ಞಾನಿಕವಾಗಿ ಅಳವಡಿಕೆ ಮಾಡಿದ್ದು, ಇದರಿಂದ ರೈತರ ಜಮೀನಿಗೆ ಹಾನಿಯಾಗಿದೆ. ಕಂಪೆನಿ ಈವರೆಗೂ ಪರಿಹಾರ ನೀಡಿಲ್ಲ. ಆದ್ದರಿಂದ ಬೆಳೆ ನಷ್ಟ ಪರಿಹಾರವಾಗಿ ಕಂಪನಿ ಎಕರೆಗೆ ರೂ 60ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ನೀಡುವುದಕ್ಕೆ ಸರ್ಕಾರ ಬ್ರಿಟಿಷರ ಕಾಲದ ಮಾರ್ಗಸೂಚಿ ಅನುಸರಿಸುತ್ತಿದೆ. ಹಾಗಾಗಿ ಸರ್ಕಾರ ರೈತರಿಗೆ ನಾಮ ಮಾತ್ರದ ಪರಿಹಾರ ದೊರೆಯುತ್ತಿದೆ. ದಶಕಗಳು ಕಳೆದರೂ ಮಾರ್ಗಸೂಚಿ ಬದಲಾಗದಿರುವುದು ವಿಪರ್ಯಾಸ. ಬೀಜ, ಗೊಬ್ಬರಕ್ಕಾಗಿ ನೀಡುತ್ತಿರುವ ಸಹಾಯಧನ ನೇರವಾಗಿ ರೈತರಿಗೆ ಪಾವತಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

8 ವರ್ಷಗಳಿಂದ ಜಿಲ್ಲೆ ಸತತ ಬರಗಾಲದಿಂದ ತತ್ತರಿಸಿದ್ದು, ರೈತರು ಕೃಷಿ ಆದಾಯವಿಲ್ಲದೇ ಆರ್ಥಿಕವಾಗಿ ಸೊರಗಿ ಹೋಗಿದ್ದಾರೆ. ಹತ್ತು ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಜಿಲ್ಲೆಯ ಎಲ್ಲ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೊಂಚೆ ಶಿವರುದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಡಾ.ಸ್ವಾಮಿ, ಎಚ್.ಎಸ್.ಬಸವ ರಾಜಪ್ಪ, ಎಸ್.ವಿಶ್ವನಾಥ, ವಿ.ಪಾಂಡುರಂಗಪ್ಪ, ಕೇಶವರೆಡ್ಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.