ADVERTISEMENT

ಅನುದಾನ ಬಿಡುಗಡೆಗೆ ಸದಸ್ಯರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 8:00 IST
Last Updated 21 ಜನವರಿ 2011, 8:00 IST

ಹಿರಿಯೂರು: ಜಿಲ್ಲಾ ಪಂಚಾಯ್ತಿ ಮೇಲೆ ಒತ್ತಡ ತಂದು 13ನೇ ಹಣಕಾಸು ಯೋಜನೆಯಡಿ ನಮಗೆ ಬರಬೇಕಾಗಿರುವ ್ಙ 25.16 ಲಕ್ಷ ಬಿಡುಗಡೆ ಮಾಡಬೇಕು ಎಂದು ಗುರುವಾರ ಇಲ್ಲಿನ ತಾ.ಪಂ. ಸಾಮಾನ್ಯಸಭೆಯಲ್ಲಿ ಸದಸ್ಯ ವಿ. ರಂಗಸ್ವಾಮಿ ಒತ್ತಾಯ ಮಾಡಿದರು.

ಸರ್ಕಾರದಿಂದ ಜಿ.ಪಂ.ಗೆ ಹಣ ಜಮಾ ಆಗಿದ್ದರೂ, ಸದರಿ ಹಣವನ್ನು ಬಿಡುಗಡೆ ಮಾಡದಿರಲು ಕಾರಣವೇನು? ವಿವಿಧ ಯೋಜನೆಗಳಿಗೆ ಈಗಾಗಲೇ ಆಯ್ಕೆ ಆಗಿರುವ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು. ಸರ್ಕಾರಿ ಇಲಾಖೆಗಳಲ್ಲಿ ಇರುವ ದುಡ್ಡನ್ನು ಸದ್ಭಳಕೆ ಮಾಡಿಕೊಳ್ಳುತ್ತಿಲ್ಲ. ಬಹಳಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆಯುತ್ತಿದೆ. ಯಾವುದೇ ಯೋಜನೆ ಇರಲಿ ಜನಪ್ರತಿನಿಧಿಗಳ ಮೂಲಕ ಅನುಷ್ಠಾನ ಆಗಬೇಕು ಎಂದು ಸದಸ್ಯರು ಆಗ್ರಹಿಸಿದರು.

ತಾ.ಪಂ. ನಿಂದ ಕೃಷಿ ಇಲಾಖೆಗೆ ನೀಡಿದ್ದ 1.80 ಲಕ್ಷ ಅನುದಾನವನ್ನು ಯಾವುದಕ್ಕೆ ಬಳಸಿಕೊಳ್ಳಲಾಗಿದೆ. ಏನನ್ನು ಖರೀದಿ ಮಾಡಲಾಗಿದೆ. ಆಸಮಯದಲ್ಲಿ ಯಾವ ಜನಪ್ರತಿನಿಧಿ ಇದ್ದರು ಎಂದು ವಿ. ರಂಗಸ್ವಾಮಿ ಪ್ರಶ್ನಿಸಿದಾಗ, ಅಧ್ಯಕ್ಷತೆ ವಹಿಸಿದ್ದ ಸಿ. ಪ್ರವೀಣ್ ಅವರು ಸದರಿ ಅನುದಾನ ಬಳಕೆಯಲ್ಲಿ ಸಂಪೂರ್ಣ ಅವ್ಯವಹಾರ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು ಎಂದು ಸಲಹೆ ಮಾಡಿದರು.

ಸರ್ಕಾರದ ವಿವಿಧ ಯೋಜನೆಗಳಿಗೆ ಮಂಜೂರಾಗಿರುವ ಹಣವನ್ನು ನಿಗದಿತ ಅವಧಿಯಲ್ಲಿ ಖರ್ಚು ಮಾಡಬೇಕು. ಅಭಿವೃದ್ಧಿ ಯೋಜನೆಗಳಲ್ಲಿ ವಿಳಂಬ ಧೋರಣೆ ಸರಿಯಲ್ಲ. ಖರೀದಿ ನಿಯಮ ಬಿಟ್ಟು ಅಧಿಕಾರಿಗಳು ಹೋಗಬಾರದು. ಸ್ಥಾಯಿ ಸಮಿತಿ ಸದಸ್ಯರ ಜತೆ ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬಂದ ನಂತರ ಖರೀದಿ ಮಾಡಬೇಕು ಎಂದು ಕಾರ್ಯ ನಿರ್ವಹಣಾಧಿಕಾರಿ ಡಾ.ವೆಂಕಟೇಶ್ ಸಲಹೆ ಮಾಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಡಾ.ಸುಜಾತಾ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.