ADVERTISEMENT

ಅಮಾನುಷ ವರ್ತನೆ: ವೈದ್ಯರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 5:35 IST
Last Updated 22 ಫೆಬ್ರುವರಿ 2012, 5:35 IST

ಚಿತ್ರದುರ್ಗ: ಹೆರಿಗೆ ಸಮಯದಲ್ಲಿ ತುಂಬು ಗರ್ಭಿಣಿ ಜತೆ ಅಮಾನುಷವಾಗಿ ವರ್ತಿಸಿ ನವಜಾತ ಶಿಶುವಿನ ಚಿಂತಾಜನಕ ಸ್ಥಿತಿಗೆ ಕಾರಣರಾಗಿದ್ದಾರೆ ಎನ್ನಲಾದ ನಗರದ ಚಿಕ್ಕಪೇಟೆಯ ಕೃಷ್ಣ ಆಸ್ಪತ್ರೆಯ ವೈದ್ಯೆ ಡಾ. ಅರ್ಚನಾ, ನರ್ಸ್‌ಗಳಾದ ಶಾಂತಮ್ಮ ಮತ್ತು ಮೀನಾಕ್ಷಮ್ಮ ಅವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಕೀಲರಾದ ಜೆ. ಮಹಾಂತೇಶ್ ಈ ಬಗ್ಗೆ ದೂರು ನೀಡಿದ್ದಾರೆ. ಫೆ.16ರಂದು ಮಹಾಂತೇಶ್ ಅವರ ಅತ್ತಿಗೆ ಹೇಮಾವತಿ ಅವರನ್ನು ಬೆಳಿಗ್ಗೆ 11ಕ್ಕೆ ನಗರದ ಕೃಷ್ಣ ಆಸ್ಪತ್ರೆಗೆ ಹೆರಿಗಾಗಿ ದಾಖಲಿಸಿದ್ದರು.

ಅದೇ ದಿನ ಸಂಜೆ 6.30ಕ್ಕೆ ವೈದ್ಯರಾದ ಅರ್ಚನಾ ಮತ್ತು ನರ್ಸ್‌ಗಳಾದ ಶಾಂತಮ್ಮ ಮತ್ತು ಮೀನಾಕ್ಷಮ್ಮ ಅವರು ಸೇರಿ ಗರ್ಭಿಣಿ ಹೇಮಾವತಿ ಅವರಿಗೆ ಹೆರಿಗೆಯಾಗುವ ಸಮಯದಲ್ಲೇ ಹೇಯ ಕೃತ್ಯವೆಸಗಿದ್ದಾರೆ.

ಹೇಮಾವತಿ ಅವರನ್ನು ನಿಂದಿಸಿ, ಕೈಯಿಂದ ಹೊಡೆದು ಮಗು ಭ್ರೂಣದಿಂದ ಹೊರಬರುವ ವೇಳೆ ಸಾವಿನ ಸ್ಥಿತಿಗೆ ಕಾರಣವಾಗಿದ್ದಾರೆ. ಮಗುವಿನ ಜನ್ಮದ ವೇಳೆಯಲ್ಲಿ ಮಗುವಿನ ತಲೆಗೆ ಕ್ಲಿಪ್ ಮತ್ತು ಇಕ್ಕಳವನ್ನು ಬಳಸಿದ್ದರಿಂದ ತಲೆ ಭಾಗಕ್ಕೆ ಹಾನಿಯಾಗಿ ರಕ್ತ ಸಂಚಲನ ಆಗದಂತಹ ಪರಿಸ್ಥಿತಿಯಾಗಿದೆ. ಜತೆಗೆ ಉಸಿರಾಟದ ತೊಂದರೆ ಉಂಟು ಮಾಡಿ ಮಗು ಸಾವು ಬದುಕಿನ ಸ್ಥಿತಿಗೆ ಕಾರಣಕರ್ತರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹೇಮಾವತಿ ಅವರಿಗೆ ಹೆರಿಯಾಗುವ ಸಮಯದಲ್ಲೇ ಮತ್ತೊಬ್ಬ ಮಹಿಳೆಗೆ ಹೆರಿಗೆ ನೋವು ಬಂದಿದೆ ಎಂದು ಹೇಳಿ ಅವರಿಗೆ ಹೆರಿಗೆ ಮಾಡಿಸಲು ಟೇಬಲ್ ಮೇಲಿಂದ ಇಳಿಸಲು ವೈದ್ಯರು ಸೂಚಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಹೇಮಾವತಿ ಅವರ ಕೆನ್ನೆಗೆ ಹೊಡೆದು ಬಲವಂತವಾಗಿ ಇಳಿಸಿದ್ದಾರೆ.

ಈ ಸಮಯದಲ್ಲಿ ನೀರು ಕೇಳಿದರೂ ಕೊಟ್ಟಿಲ್ಲ. ಮತ್ತೊಬ್ಬ ಮಹಿಳೆಯ ಹೆರಿಗೆಯಾದ ನಂತರವೇ ಹೆರಿಗೆ ಮಾಡಿಸಿ ಮಗುವಿನ ಪ್ರಾಣಕ್ಕೆ ಸಂಚಕಾರ ತಂದಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಸೋಮವಾರ ತಿಳಿಯಿತು. ಪ್ರಸ್ತುತ ಮಗು ಬಸವೇಶ್ವರ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಂತಾಜನಕವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.