ADVERTISEMENT

ಅಮೃತ್ ಮಹಲ್ ಕಾವಲ್ ಹೋರಾಟಕ್ಕೆ ಚಾಲನೆ

ಜುಲೈ 25ರಂದು ಚಿತ್ರದುರ್ಗದಲ್ಲಿ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 10:42 IST
Last Updated 19 ಜುಲೈ 2013, 10:42 IST

ಚಳ್ಳಕೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಮೃತ್ ಮಹಲ್ ಕಾವಲ್‌ನ ಜಮೀನನ್ನು ಸ್ಥಳೀಯರ ಒಪ್ಪಿಗೆ ಇಲ್ಲದೇ ದೇಶದ ಪ್ರತಿಷ್ಠಿತ ಸಂಸ್ಥೆಗಳಿಗೆ ನೀಡುವ ಮೂಲಕ ಇಲ್ಲಿನ ಜನರ ಬದುಕುವ ಹಕ್ಕನ್ನೇ ಕಸಿದುಕೊಂಡಿವೆ ಎಂದು ಜಿಲ್ಲಾ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಜಯಣ್ಣ ಆರೋಪಿಸಿದರು.

ಅಮೃತ ಮಹಲ್ ಕಾವಲ್ ಉಳಿವಿಗಾಗಿ ಇದೇ 25ರಂದು ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಪೂರ್ವಭಾವಿಯಾಗಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳು ಅತ್ಯಂತ ಹಿಂದುಳಿದ ಪ್ರದೇಶಗಳು.

ಇಂತಹ ಪ್ರದೇಶಗಳಲ್ಲಿ ಮಳೆ ಕಡಿಮೆ ಬೀಳುತ್ತಿದ್ದು, ಉಷ್ಣವಲಯದ ಪ್ರದೇಶಗಳಾಗಿವೆ. ಇದನ್ನು ಮನಗಂಡ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಈ ಪ್ರದೇಶವನ್ನು ಅಮೃತ್‌ಮಹಲ್ ಕಾವಲ್ ಆಗಿ ಮೀಸಲಿಟ್ಟಿದ್ದರು.

ಶತಮಾನಗಳಿಂದ ಸ್ಥಳೀಯರ ಬದುಕಿನೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಸ್ಥಳೀಯರಿಗೆ ಮಾಹಿತಿ ನೀಡದೇ ಏಕಾಏಕಿ ಸಂಸ್ಥೆಗಳಿಗೆ ಪರಭಾರೆ ಮಾಡಿರುವ ಕ್ರಮ ಜನ ವಿರೋಧಿಯಾಗಿದೆ ಎಂದರು.

ಇಂತಹ ಕ್ರಮವನ್ನು ಖಂಡಿಸಿ ಇದೇ 25 ರಂದು ಚಿತ್ರದುರ್ಗದ ಜಿಲ್ಲಾಧಿಕಾರಿ  ಕಚೇರಿ ಮುಂಭಾಗದಲ್ಲಿ ಕುರಿ, ಜಾನುವಾರುಗಳನ್ನು ಕರೆದೊಯ್ದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ, ಸರ್ಕಾರ ಅಮೃತ್ ಮಹಲ್, ವರವು, ಕುದಾಪುರ ಕಾವಲ್ ಜಮೀನುಗಳನ್ನು ಹಸ್ತಾಂತರಿಸುವ ಮೂಲಕ ಇಲ್ಲಿನ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರದಲ್ಲಿ ತೊಡಗಿದೆ. ಪ್ರತಿಷ್ಠಿತ ಸಂಸ್ಥೆಗಳು ಪ್ರಾರಂಭ ಆಗುತ್ತಿರುವುದರಿಂದ ಸ್ಥಳೀಯರ ಬದುಕು ನಾಶವೇ ಹೊರತು ಪ್ರಯೋಜನ ಇಲ್ಲ ಎಂದರು.

ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್ ಮಾತನಾಡಿ, ಬಹುತೇಕ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಸಮುದಾಯಗಳ ಜನರೇ ವಾಸಿಸುವ ಈ ಪ್ರದೇಶವನ್ನು ಸಂಸ್ಥೆಗಳಿಗೆ ಪರಭಾರೆ ಮಾಡಿರುವುದು ಕಾನೂನು ಬಾಹಿರ. ಪಶುಸಂಗೋಪನೆ, ಕುರಿ ಸಾಕಾಣೆಯೇ ಪ್ರಧಾನ ವೃತ್ತಿಯಾಗಿರುವ ಇಲ್ಲಿನ ಜನರಿಗೆ ಜಮೀನು ಹಸ್ತಾಂತರಿಸಿರುವುದು ಆಘಾತ ತಂದಿದೆ. ಅಪಾರ ಸಸ್ಯ ಸಂಪತ್ತು, ವನ್ಯಜೀವಿಗಳನ್ನು ಕಾಪಾಡಬೇಕಾದ ಸರ್ಕಾರವೇ ಈ ಪ್ರದೇಶವನ್ನು ನಾಶಗೊಳಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಕರಿಯಣ್ಣ ಮಾತನಾಡಿ, ಈಗಾಗಲೇ ಸಂಸ್ಥೆಗಳು ಜಮೀನಿಗೆ ಅಡ್ಡಗೋಡೆಗಳನ್ನು ಕಟ್ಟುತ್ತಿವೆ. ಇಂತಹ ಜಮೀನು ಕಳೆದುಕೊಂಡರೆ ಈ ಭಾಗದ 80 ಹಳ್ಳಿಗಳ ಜನರು ಬದುಕಲು ಬೇರೊಂದು ಸ್ಥಳಕ್ಕೆ ಹೋಗಬೇಕಾಗುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಈ ಭಾಗದ ದುರ್ಗಾವರ, ಭರಮಸಾಗರ, ಕರೀಕೆರೆ, ಹೊಸೂರು, ರಂಗವ್ವನಹಳ್ಳಿ, ವಿಶ್ವೇಶ್ವರಪುರ, ದೊಡ್ಡ ಉಳ್ಳಾರ್ತಿ ಗ್ರಾಮಗಳ ಜನರೊಂದಿಗೆ ಸಭೆಗಳನ್ನು ನಡೆಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ, ದೊರೆ ಬೈಯ್ಯಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ರಾಜು, ಹನುಮಂತರಾಯಪ್ಪ, ಕಾವಲ್ ಓಬನಾಯಕ, ಬಾವಿ ತಿಪ್ಪೇಸ್ವಾಮಿ, ದಾಸಣ್ಣ, ಹನುಮಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT