ADVERTISEMENT

ಅವನತಿಯಲ್ಲಿ ಮೀನು ಸಾಕಣೆ ತೊಟ್ಟಿಗಳು...

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 6:50 IST
Last Updated 10 ಫೆಬ್ರುವರಿ 2011, 6:50 IST

ಮೊಳಕಾಲ್ಮುರು: ಹಲವು ರಂಗಗಳಲ್ಲಿ ಅತ್ಯಂತ ಹಿಂದುಳಿದಿರುವ ಮೊಳಕಾಲ್ಮುರು ತಾಲ್ಲೂಕಿಗೆ ಸ್ವಉದ್ಯೋಗ ಕಾರ್ಯಕ್ರಮಗಳು ಅವಶ್ಯಕವಾಗಿ ಬೇಕಾಗಿವೆ. ಇದನ್ನು ಹೋಗಲಾಡಿಸುವಲ್ಲಿ ಮೀನು ಸಾಕಣೆ ಸಹ ಪ್ರಮುಖವಾಗಿದೆ. ಆದರೆ, ಇದನ್ನು ನಿರ್ವಹಿಸಬೇಕಾದ ಮೀನುಗಾರಿಗೆ ಇಲಾಖೆ ಕೈಕಟ್ಟಿಕೊಂಡು ಕೂತಿದೆ ಎಂಬುದಕ್ಕೆ ತಾಲ್ಲೂಕಿನ ಹಾನಗಲ್ ಪ್ರವಾಸಿ ಮಂದಿರ ಮುಂಭಾಗದಲ್ಲಿ ಸೇವೆಯಿಂದ ದೂರವಾಗಿ ಅವನತಿ ಹಾದಿಯಲ್ಲಿರುವ ಮೀನು ಸಾಕಣೆ ತೊಟ್ಟಿಗಳೇ ಸೂಕ್ತ ನಿದರ್ಶನ.

ಮೀನು ಸಾಕಲು ಮುಖ್ಯವಾಗಿ ನೀರು ಬೇಕು. ಈ ಕನಿಷ್ಠ ಅರಿವು ಇಲ್ಲದೇ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾಕಣೆ ತೊಟ್ಟಿಗಳ ವ್ಯರ್ಥತೆ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಮುಂದುವರಿದಿದೆ. ತಾಲ್ಲೂಕಿನಲ್ಲಿ ಕಚೇರಿ ಹೊಂದಿರದ ಮೀನುಗಾರಿಕೆ ಇಲಾಖೆಗೆ ತಾಲ್ಲೂಕಿನ ಜವಾಬ್ದಾರಿಯನ್ನು ಪಕ್ಕದ ಚಳ್ಳಕೆರೆ ಕಚೇರಿ ವ್ಯಾಪ್ತಿಗೆ ನೀಡಲಾಗಿದೆ. ತಾಲ್ಲೂಕಿಗೆ ಅಧಿಕಾರಿಗಳು ಯಾವಾಗ ಬರುತ್ತಾರೆ.ಹೋಗುತ್ತಾರೆ ಎಂಬ ಕನಿಷ್ಠ ಮಾಹಿತಿ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಇನ್ನು ಈ ಬಗ್ಗೆ ವಿಚಾರಿಸಲು ಅಧಿಕಾರಿಗಳು ತಾ.ಪಂ. ಕೆಡಿಪಿ ಮತ್ತು ಸಾಮಾನ್ಯ ಸಭೆಗಳಿಗೆ ಗೈರು ಆಗುತ್ತಾರೆ. ಒಂದು ವೇಳೆ ಹಾಜರಾದರೂ ಸಹ ಅಧೀನ ಅಧಿಕಾರಿಗಳನ್ನು ಕಳಿಸಿ ಕೈತೊಳೆದು ಕೊಳ್ಳುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಗಳಲ್ಲಿ ಹಲವು ನಿರ್ಣಯ ಕೈಗೊಂಡಿದೆಯಾದರೂ ಯಾವುದೇ ಕ್ರಮ ಜರುಗಿದ ಬಗ್ಗೆ ಮಾಹಿತಿ ಇಲ್ಲ ಎನ್ನಲಾಗಿದೆ.

ಈ ತೊಟ್ಟಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಸ್ವಸಹಾಯ ಸಂಘಗಳಿಗೆ ಗುತ್ತಿಗೆ ನೀಡುವ ಮೂಲಕ ಸದ್ಬಳಕೆ ಮಾಡುವ ಬಗ್ಗೆ ಚಿಂತನೆ ನಡೆದಿತ್ತು. ಆದರೆ, ಈವರೆಗೆ ಕಾರ್ಯಗಳು ಜರುಗಿಲ್ಲ. ಈಗಾಗಲೇ ಅವನತಿ ಹಾದಿಯಲ್ಲಿರುವ ಈ ತೊಟ್ಟಿ ಮತ್ತು ಕಚೇರಿ ಕಟ್ಟಡ ಶೀಘ್ರ ಬಳಕೆ ಮಾಡಿಕೊಳ್ಳಲು ಮುಂದಾಗದಿದ್ದರೆ ಅವುಗಳು ಕೈತಪ್ಪುವುದರಲ್ಲಿ ಸಂಶಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಮನವಿ ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.