ADVERTISEMENT

ಅಹಿಂಸಾತ್ಮಕ ಹೋರಾಟದಿಂದ ಜಯ

ಬಂದೀಖಾನೆಯಲ್ಲಿ ಮಹಾದಾಯಿ ಹೋರಾಟದ ರೈತರಿಗೆ ಮುರುಘಾ ಶರಣರ ಬೆಂಬಲ ನುಡಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 10:01 IST
Last Updated 2 ಆಗಸ್ಟ್ 2016, 10:01 IST
ಮಹಾದಾಯಿ ನದಿ ನೀರು ಹಂಚಿಕೆ ಹೋರಾಟದ ವೇಳೆ ಬಂಧನಕ್ಕೊಳಗಾಗಿ ನಗರದ ಜೈಲಿನಲ್ಲಿರುವ ರೈತರನ್ನು ಉದ್ದೇಶಿಸಿ ಸೋಮವಾರ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.
ಮಹಾದಾಯಿ ನದಿ ನೀರು ಹಂಚಿಕೆ ಹೋರಾಟದ ವೇಳೆ ಬಂಧನಕ್ಕೊಳಗಾಗಿ ನಗರದ ಜೈಲಿನಲ್ಲಿರುವ ರೈತರನ್ನು ಉದ್ದೇಶಿಸಿ ಸೋಮವಾರ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.   

ಚಿತ್ರದುರ್ಗ: ‘ಯಾವುದೇ ಹೋರಾಟವಿರಲಿ, ಅದು ಅಹಿಂಸಾತ್ಮಕವಾಗಿ ನಡೆಯಬೇಕು. ಆ  ಮೂಲಕವೇ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಬೇಕು. ಅಹಿಂಸಾ ಹೋರಾಟಕ್ಕೆ ಎಂದಿಗೂ ಜಯ ಸಿಗುತ್ತದೆ’ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮಹಾದಾಯಿ ನದಿ ನೀರು ಹಂಚಿಕೆ ಹೋರಾಟದ ವೇಳೆ ಬಂಧನಕ್ಕೊಳಗಾಗಿ ನಗರದ ಜೈಲಿನಲ್ಲಿರುವ ನವಲಗುಂದ–ನರಗುಂದದ 57 ಮಂದಿ ರೈತರನ್ನು ಉದ್ದೇಶಿಸಿ ಸೋಮವಾರ  ಅವರು ಮಾತನಾಡಿದರು.

‘ಗಾಂಧಿ ತತ್ವ ಅನುಸರಿಸಿ ಹೋರಾಟ ಮಾಡಬೇಕು. ಹೋರಾಟದ ವೇಳೆ  ಮಾನವೀಯವಾಗಿ ನಡೆದು ಕೊಳ್ಳುವುದನ್ನು ಕಲಿಯಬೇಕು. ದೌರ್ಜನ್ಯಗಳಿಗೆ ಎಂದಿಗೂ ಅವಕಾಶ ನೀಡಬಾರದು’ ಎಂದು ಶರಣರು ಕಿವಿಮಾತು ಹೇಳಿದರು.

ಕಳೆದ ವಾರ ನವಲಗುಂದ – ನರಗುಂದ ಭಾಗದ 14 ತಾಲ್ಲೂಕುಗಳಲ್ಲಿ ರೈತರು ಕುಡಿಯುವ ನೀರಿಗಾಗಿ ಹೋರಾಟ ನಡೆಸಿದರು. ಸರ್ಕಾರಗಳು ಕನಿಷ್ಠ  ಕುಡಿಯುವ ನೀರನ್ನು ಕೊಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದ ಶರಣರು, ‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಎರಡೂ ಸರ್ಕಾರಗಳು ಒಟ್ಟಾಗಿ ಈ ಸಮಸ್ಯೆಯನ್ನು ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

‘385 ದಿನಗಳಿಂದ ಮಹಾದಾಯಿ ಹೋರಾಟ ನಡೆಯುತ್ತಿದೆ. ಈ ಒಂದು ವಾರದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೋರಾಟದಲ್ಲಿ ಅನೇಕರು ಗಾಯಗೊಂಡಿದ್ದಾರೆ. ಆಘಾತಕ್ಕೆ ಒಳಗಾಗಿದ್ದಾರೆ. ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ’ ಎಂದರು.

ಉತ್ತರ ಕರ್ನಾಟಕದ ರೈತ ಸೇನೆ ಸಂಘಟನೆಯ ಮುಖಂಡ ವೀರೇಶ್ ಸಬರದ್ ಸ್ವರೂಪ್‌ ಮಠ್ ಮಾತನಾಡಿ, ‘ಮಹಾದಾಯಿ ನೀರಿಗಾಗಿ ಮಾಡಿದ ಹೋರಾಟ ಕೇವಲ ರೈತರದಷ್ಟೆ ಅಲ್ಲ.  ಹೋರಾಟದ ವೇಳೆ ಒಂದಷ್ಟು ವ್ಯತ್ಯಾಸಗಳಾಗಿವೆ.

ಕಾನೂನು ಸುವ್ಯವಸ್ಥೆಗಾಗಿ ಹೋರಾಟಗಾರರನ್ನು ಬಂಧಿಸಿ, ಇಲ್ಲಿಗೆ ಕರೆತರಲಾಗಿದೆ. ಇಲ್ಲಿನ ಅಧಿಕಾರಿಗಳು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ. ನೀವ್ಯಾರೂ ಆತಂಕಪಡುವ ಅಗತ್ಯ ವಿಲ್ಲ. ನಿಮ್ಮ ಕುಟುಂಬದೊಂದಿಗೆ ನಾವಿ ದ್ದೇವೆ’ ಎಂದು ಬೆಂಬಲ ನೀಡಿದರು.

‘ನಿಮ್ಮ ಈ ಸ್ಥಿತಿ ಕಂಡು ನನಗೂ ದುಃಖ ಆಗುತ್ತಿದೆ. ನಾವು–ನೀವೆಲ್ಲ ಒಂದು ಶ್ರೇಷ್ಠ ಕೆಲಸ ಮಾಡುತ್ತಿದ್ದೇವೆ. ಭವಿಷ್ಯದ ತಲೆಮಾರು ನಮ್ಮನ್ನೆಲ್ಲ ನೆನೆಯುತ್ತದೆ.

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಹೇಗೆ ದೇಶ ಭಕ್ತರೋ ಹಾಗೆ, ಕುಡಿಯುವ ನೀರಿಗಾಗಿ ಹೋರಾಡಿದ ನೀವೂ ದೇಶಭಕ್ತರೇ. ಇತಿಹಾಸದ ಪುಟದಲ್ಲಿ ನಿಮ್ಮ ಹೋರಾಟಗಳು ದಾಖಲಾಗುತ್ತವೆ’ ಎಂದು ತಿಳಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ದೊರೆಯಲು 300 ವರ್ಷ, ರಾಜ್ಯಗಳನ್ನು ಒಗ್ಗೂಡಿಸಲು 60 ವರ್ಷ ಹೋರಾಡಬೇಕಾಯಿತು. ಮಹಾದಾಯಿ ನೀರಿಗಾಗಿ 80ರ ದಶಕದಿಂದಲೂ ಹೋರಾಟ ಮಾಡಲಾಗುತ್ತಿದೆ.

ADVERTISEMENT

ಈ ಹಿಂದೆ ಹೋರಾಟಕ್ಕಾಗಿ ಹಲವು ಮಠದ ಸ್ವಾಮೀಜಿಗಳೊಂದಿಗೆ ಮುರುಘಾ ಶರಣರು ಬೆಂಬಲ ನೀಡಿದ್ದರು. ಈ ಹೋರಾಟ ಮುಂದುವರಿಸಬೇಕು’ ಎಂದು ಶರಣರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ನಂತರ ಮುರುಘಾ ಶರಣರು ರೈತರಿಗೆ ಹಣ್ಣು ವಿತರಿಸಿದರು. ಕಾರ್ಯಕ್ರಮದಲ್ಲಿ ಜೈಲು ಸೂಪರಿಂಟೆಂಡೆಂಟ್ ಅಂಬರೀಶ್ ಎಸ್. ಪೂಜಾರಿ, ಅಹಿಂದ ಹೋರಾಟಗಾರ ಮರುಘರಾಜೇಂದ್ರ ಒಡೆಯರ್, ಸಾಮಾಜಿಕ ಕಾರ್ಯಕರ್ತ ಎಂ.ಶೇಷಣ್ಣಕುಮಾರ್, ಮುರುಘಾ ಮಠದ ವ್ಯವಸ್ಥಾಪಕ ಪರಮಶಿವಯ್ಯ, ಪ್ರೊ. ಸಾಲಿಮಠ್, ಉತ್ತರ ಕರ್ನಾಟಕದ ರೈತ ಮುಖಂಡರು ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.