ADVERTISEMENT

ಆಹಾರ ಉತ್ಪಾದನೆ ಹೆಚ್ಚಿಸಲು ಗಮನ ನೀಡಿ

ಸಂವಾದ ಕಾರ್ಯಕ್ರಮದಲ್ಲಿ ಶ್ರೀಕಂಠೇಶ್ವರಸ್ವಾಮಿ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 11:19 IST
Last Updated 18 ಡಿಸೆಂಬರ್ 2012, 11:19 IST

ಚಿತ್ರದುರ್ಗ: ಕೃಷಿ ಜಮೀನು ಕಡಿಮೆ ಆಗುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಉತ್ಪಾದನೆ ಹೆಚ್ಚಿಸುವ ಕ್ರಮಗಳ ಕುರಿತು ಗಮನ ನೀಡಬೇಕಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಡಾ.ಎಸ್.ಜಿ. ಶ್ರೀಕಂಠೇಶ್ವರಸ್ವಾಮಿ ಪ್ರತಿಪಾದಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿ-ವಿಜ್ಞಾನಿ ನೇರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಬಂದ ಕೆಲ ವರ್ಷಗಳಲ್ಲಿ ಜನಸಂಖ್ಯೆ ಕಡಿಮೆಯಿತ್ತು. ಆದರೆ, ಈಗ ಜನಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ಕೃಷಿ ಭೂಮಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ ಉತ್ಪನ್ನಗಳ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಈಗ ಲಭ್ಯವಿರುವ ಭೂಮಿಯಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪಾದನೆ ಮಾಡಬೇಕಾಗಿದೆ ಎಂದು ನುಡಿದರು.
ಸಂಪರ್ಕ ಕ್ಷೇತ್ರದಲ್ಲಿ ಇಂದು ಕ್ರಾಂತಿ ನಡೆದಿದೆ. ಮೊಬೈಲ್-ದೂರವಾಣಿ ಕ್ರಾಂತಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಮೊಬೈಲ್ ಬಳಕೆಯಲ್ಲಿ ಅಮೆರಿಕ, ಚೀನಾ ನಂತರ ಭಾರತ 3ನೇ ಸ್ಥಾನದಲಿದೆ ಎಂದು ವಿವರಿಸಿದರು.

ಮಾಹಿತಿ ತಂತ್ರಜ್ಞಾನ, ಜೈವಿಕ ವಿಜ್ಞಾನ ಸೇರಿದಂತೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಅಪಾರ. ಕಳೆದ 60 ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ಅನೇಕ ಮಜಲುಗಳನ್ನು ಕಂಡಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಬದಲಾವಣೆಗಳಾಗಿದ್ದು, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, 40 ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಇದೇ ರೀತಿ 200ಕ್ಕೂ ಹೆಚ್ಚು ಡಿಪ್ಲೊಮಾ ಕಾಲೇಜುಗಳಿವೆ. ಜತೆಗೆ, ಐಟಿಐ ಕಾಲೇಜುಗಳಿವೆ. ಇವರೆಲ್ಲರಿಗೂ ಉದ್ಯೋಗ ನೀಡುವ ಹೊಣೆ ಸರ್ಕಾರ ಮತ್ತು ಖಾಸಗಿ ಕಂಪೆನಿಗಳದ್ದು. ಬೆಂಗಳೂರಿನ ಪೀಣ್ಯಾ ಅತಿದೊಡ್ಡ ಕೈಗಾರಿಕಾ ವಸಾಹತು ಪ್ರದೇಶ.

6 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಇಲ್ಲಿವೆ. ಇತ್ತೀಚೆಗೆ ಅಪೆರೆಲ್ ತಂತ್ರಜ್ಞಾನದಿಂದ ಬಟ್ಟೆಗಳ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಹಲವು ಬದಲಾವಣೆಗಳಾಗಿದ್ದು, ಸಿದ್ಧ ಉಡುಪುಗಳ ತಯಾರಿಕೆಯಲ್ಲಿ ಹಲವು ರೀತಿಯ ಉದ್ಯೋಗಗಳು ಸೃಷ್ಟಿಯಾಗಿವೆ. ಆದ್ದರಿಂದ, ಪ್ರತಿದಿನ ವಿದ್ಯಾರ್ಥಿಗಳು ಅದ್ಭುತ ಸಂಗತಿಗಳನ್ನು ತಿಳಿದುಕೊಳ್ಳಬೇಕು. ಧೈರ್ಯವಾಗಿ ಮುನ್ನುಗ್ಗುವ ಛಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಜಿ. ಶಿವಣ್ಣ, ಡಿಡಿಪಿಐ ಎಚ್. ಮಂಜುನಾಥ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಚ್. ಗೋಪಾಲಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಮಂಡಳಿ ಸದಸ್ಯ ಚಳ್ಳಕೆರೆ ಯರ‌್ರಿಸ್ವಾಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ ಉಪಸ್ಥಿತರಿದ್ದರು. ಹುರುಳಿ ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT