ADVERTISEMENT

ಇಂದು ಚಿತ್ರದುರ್ಗ ಬಂದ್‌ಗೆ ಕರೆ

ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 5:46 IST
Last Updated 18 ಮಾರ್ಚ್ 2014, 5:46 IST

ಚಿತ್ರದುರ್ಗ: ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಬಹುಸಂಖ್ಯಾತ ಮಾದಿಗ ಸಮುದಾಯದ ಸ್ಥಳೀಯರನ್ನು ಕಡೆಗಣಿಸಿದೆ ಎಂದು ಆರೋಪಿಸಿ ಜಿಲ್ಲಾ ಮಾದಿಗ ಯುವಸೇನೆ ವತಿಯಿಂದ ಮಂಗಳವಾರ ಚಿತ್ರದುರ್ಗ ಬಂದ್‌ಗೆ ಕರೆ ನೀಡುತ್ತಿರುವುದಾಗಿ ಮಾದಿಗ ಯುವ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದುರ್ಗ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಕರೆದಿದ್ದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೊರ ಜಿಲ್ಲೆಯವರು, ಮೂಡಿಗೆರೆ ಕ್ಷೇತ್ರದಲ್ಲಿ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಬಿ.ಎನ್.ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರು ಚಂದ್ರಪ್ಪಅವರನ್ನು ಕಣಕ್ಕಿಳಿಸುವ ಮೂಲಕ  ಜಿಲ್ಲೆಯ ಜನತೆಗೆ ದ್ರೋಹ ಬಗೆದಿದ್ದಾರೆ. ಒಂದು ವೇಳೆ ಚಂದ್ರಪ್ಪ ಅಭ್ಯರ್ಥಿಯಾಗಿ ಮುಂದುವರಿದರೆ ಜಿಲ್ಲೆಯ ಮಾದಿಗ ಸಮುದಾಯ ಅವರ ವಿರುದ್ದ ಮತ ಚಲಾಯಿಸುತ್ತದೆ ಎಂದರು.

ಸಚಿವರ ಈ ಕುತಂತ್ರವನ್ನು ಖಂಡಿಸಿ, ಅವರ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಚಿತ್ರದುರ್ಗ ಬಂದ್‌ಗೆಕರೆ ನೀಡಿದ್ದೇವೆ. ವರ್ತಕರು, ಆಟೊ ಮಾಲೀಕರು, ಚಾಲಕರು ಮತ್ತು ಬಸ್ ಮಾಲೀಕರು ಹಾಗೂ ನಾಗರಿಕರು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

‘ಇದೇ 26ರರವರೆಗೆ ಪಕ್ಷದ ಮುಖಂಡರಿಗೆ ಗಡುವು ನೀಡಿದ್ದೇವೆ. ಒಂದು ಪಕ್ಷ ಹೈಕಮಾಂಡ್ ತಮ್ಮ ನಿಲುವನ್ನು ಬದಲಿಸದಿದ್ದರೆ ಕಾಂಗ್ರೆಸ್
ಅಭ್ಯರ್ಥಿ ಚಂದ್ರಪ್ಪ ಅವರನ್ನು ಮಾದಿಗ ಸಮುದಾಯ ಬೆಂಬಲಿಸುವುದಿಲ್ಲ. ಮುಂದೆ ಬಂಡಾಯ ಆಭ್ಯರ್ಥಿಯನ್ನು ಕಾಂಗ್ರೆಸ್ ವಿರುದ್ದ ಕಣಕ್ಕೆ
ಇಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾದಿಗ ಯುವ ಸೇನೆ ಜಿಲ್ಲಾಧ್ಯಕ್ಷ ಪ್ರಕಾಶ್, ಕಾರ್ಯಕರ್ತರಾದ ರಮೇಶ್, ತಾರಕೇಶ್, ರಾಜಶೇಖರ್, ವಿದ್ಯಾರ್ಥಿ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರಪ್ರಸಾದ್ ಹಾಜರಿದ್ದರು.

ಬಂದ್‌ಗೆ ಬೆಂಬಲ: ಸ್ಥಳೀಯ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಮಾದಿಗ ಯುವ ಸೇನೆಯವರು ಕರೆದಿರುವ ಜಿಲ್ಲಾ ಬಂದ್‌ಗೆ ನಗರಸಭಾ ಮಾಜಿ ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ಜಿಲ್ಲಾ  ಬಂದ್‌ಗೆ ಜಿಲ್ಲೆಯ ಎಲ್ಲ ಮುಸ್ಲಿಂ ಬಾಂಧವರು ಬೆಂಬಲ ಸೂಚಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಬಂದ್‌ಗೆ ಅನುಮತಿ ಇಲ್ಲ: ಮಾದಿಗ ಯುವ ಸೇನೆ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದುರ್ಗ ಅವರು ಮಾರ್ಚ್‌ ೧೮ ರಂದು ಚಿತ್ರದುರ್ಗ ಬಂದ್‌ಗೆ ಕರೆ ನೀಡಿದ್ದು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಂದ್‌ಗೆ ಅವಕಾಶವಿಲ್ಲ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ನೀತಿ ಸಂಹಿತೆ ಜಾರಿಯಲ್ಲಿರುವುದಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಈ  ಬಂದ್‌ಗೆ ಅವಕಾಶವಿಲ್ಲ ಎಂದು ಅವರು  ತಿಳಿಸಿದ್ದಾರೆ.

ಬಂದ್ ಬೇಡ; ಕಾಂಗ್ರೆಸ್ ಎಸ್‌ಸಿ ಘಟಕ
ಚಿತ್ರದುರ್ಗ: 
ಸ್ಥಳೀಯರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿಲ್ಲ ಎಂದು ಆರೋಪಿಸಿ ಮಾದಿಗ ಯುವ ಸೇನೆ ಜಿಲ್ಲಾ ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ಕರೆ ನೀಡಿರುವ ಚಿತ್ರದುರ್ಗ ಜಿಲ್ಲಾ ಬಂದ್‌ಗೆ ನಾಗರಿಕರು ಸ್ಪಂದಿಸದಿರುವಂತೆ ಜಿಲ್ಲಾ ಕಾಂಗ್ರೆಸ್ ಎಸ್ ಸಿ ಘಟಕ ಮನವಿ ಮಾಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಘಟಕದ ಜಿಲ್ಲಾಧ್ಯಕ್ಷ ಹೊನ್ನೂರಪ್ಪ ‘ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿರುವ ಚಂದ್ರಪ್ಪ ಪಕ್ಷಕ್ಕಾಗಿ ದುಡಿದಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವನ್ನೆಲ್ಲ ಗುರುತಿಸಿ ಹೈಕಮಾಂಡ್ ಅವರಿಗೆ ಟಿಕೆಟ್ ನೀಡಿದೆ. ಇದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರ ಪಾತ್ರವಿಲ್ಲ. ಅದಕ್ಕಾಗಿ, ಚಿತ್ರದುರ್ಗ ಜಿಲ್ಲೆ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT