ADVERTISEMENT

ಉಚ್ಚಂಗಿ ಎಲ್ಲಮ್ಮ ದೇವಸ್ಥಾನ ಕಾಯಕಲ್ಪ ನೆನೆಗುದಿಗೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 8:45 IST
Last Updated 4 ಫೆಬ್ರುವರಿ 2011, 8:45 IST

ಚಿತ್ರದುರ್ಗ: ನಗರದ ಐತಿಹಾಸಿಕ ರಾಜಉತ್ಸವಾಂಬಾ ಉಚ್ಚಂಗಿ ಎಲ್ಲಮ್ಮ ದೇವಸ್ಥಾನಕ್ಕೆ ಕಾಯಕಲ್ಪ ದೊರೆಯುವುದು ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಗಳು ಗೋಚರಿಸಿವೆ.
ಧಾರ್ಮಿಕ ದತ್ತಿ ಇಲಾಖೆ, ಜಿಲ್ಲಾಡಳಿತ ಮತ್ತು ಭಾರತೀಯ ಪುರಾತತ್ವ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಕಾಯಕಲ್ಪಕ್ಕೆ ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿಗಳು ಆರಂಭವಾಗುತ್ತಿಲ್ಲ. ದೇವಸ್ಥಾನದ ಅಭಿವೃದ್ಧಿಗೆ ಧಾರ್ಮಿಕ ದತ್ತಿ ಇಲಾಖೆ ` 9.75ಲಕ್ಷ  ಅನುದಾನ ಮಂಜೂರು ಮಾಡಿ ಜಿಲ್ಲಾಡಳಿತಕ್ಕೆ ರವಾನಿಸಿದೆ. ಜಿಲ್ಲಾಡಳಿತ ಈ ಅನುದಾನವನ್ನು ಭಾರತೀಯ ಪುರಾತತ್ವ ಇಲಾಖೆಗೆ ಹಸ್ತಾಂತರಿಸಿದೆ.‘ಈ ದೇವಸ್ಥಾನ ತಮ್ಮ ಇಲಾಖೆ ವ್ಯಾಪ್ತಿಗೆ ಸೇರುವುದಿಲ್ಲ. ಮುಜರಾಯಿ ಇಲಾಖೆಗೆ ಸೇರುತ್ತದೆ’ ಎನ್ನುವುದು ಭಾರತೀಯ ಪುರಾತತ್ವ ಇಲಾಖೆ ವಾದ.

ಹಿನ್ನೆಲೆ: ಹಿಂದಿನ ಸಂಸದ ಎನ್.ವೈ. ಹನುಮಂತಪ್ಪ ಅವರು ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ಸೂಚಿಸಿದ್ದರು. ಈ ಸೂಚನೆ ಮೇರೆಗೆ ದೇವಸ್ಥಾನದ ಮುಂಭಾಗದಲ್ಲಿನ ಶಿಥಿಲವಾಗಿರುವ ಭಾಗಗಳನ್ನು ಸರಿಪಡಿಸುವುದು ಮತ್ತು ಗ್ರಾನೈಟ್ ಕಲ್ಲುಗಳನ್ನು ಅಳವಡಿಸುವುದು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು 22 ಲಕ್ಷ ರೂಪಾಯಿ ಅಂದಾಜು ಮೊತ್ತದ ಯೋಜನೆ ರೂಪಿಸಲಾಗಿತ್ತು.ಇಲಾಖೆಯ ಪ್ರಸ್ತಾವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ 2008ರ ನ.14ರಂದು ` 9.75ಲಕ್ಷ ಅನುದಾನವನ್ನು ಮಂಜೂರು ಮಾಡಿತ್ತು. ಆದರೆ, ಈ ಮೊತ್ತ ವಿವಿಧ ಇಲಾಖೆಗಳ ನಡುವೆ ಸುತ್ತಿ 2011ರ ಜ. 11ಕ್ಕೆ ಭಾರತೀಯ ಪುರಾತತ್ವ ಇಲಾಖೆ ಕೈ ಸೇರಿತು. ಹೆಚ್ಚುವರಿ ಜಿಲ್ಲಾಧಿಕಾರಿಗಳು ಅನುದಾನದ ಚೆಕ್ ಕಳುಹಿಸಿದ್ದಾರೆ.

ಆದರೆ, ಈಗ ಭಾರತೀಯ ಪುರಾತತ್ವ ಇಲಾಖೆ ತನ್ನ ವ್ಯಾಪ್ತಿಯಲ್ಲಿರದ ಕಟ್ಟಡಗಳ ದುರಸ್ತಿ ಕೈಗೊಳ್ಳಲು ಸಾಧ್ಯವಿಲ್ಲ. ಇದು ಇಲಾಖೆಯ ಸಂರಕ್ಷಿತ ಪ್ರದೇಶವಲ್ಲ. ಕಾಮಗಾರಿ ಕೈಗೊಂಡರೆ ಕಾನೂನಿನ ತೊಡಕು ಉಂಟಾಗಬಹುದು ಎಂದು ಕೈಚೆಲ್ಲಿ ಕುಳಿತಿದೆ.
ಒಟ್ಟಿನಲ್ಲಿ ಇಲಾಖೆಗಳ ತಿಕ್ಕಾಟಿನಲ್ಲಿ ಐತಿಹಾಸಿಕ ದೇವಸ್ಥಾನಕ್ಕೆ ಇದುವರೆಗೂ ನವೀಕರಣದ ಸ್ಪರ್ಶ ದೊರೆತಿಲ್ಲ. ಮಂಟಪಗಳು ಶಿಥಿಲಗೊಳ್ಳುತ್ತಿದ್ದು, ಐತಿಹಾಸಿಕ ದೇವಸ್ಥಾನ ಪುನರುಜ್ಜೀವನ ನೀಡಬೇಕು ಎಂಬುದು ಭಕ್ತರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.