ADVERTISEMENT

ಉತ್ತಮ ಸಾಧನೆಗೆ ನಿರಂತರ ಅಧ್ಯಯನ ಅಗತ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 5:05 IST
Last Updated 5 ಅಕ್ಟೋಬರ್ 2012, 5:05 IST

ಭಾರತೀಯ ಜೀವವಿಮಾ ನಿಗಮ ದ ಸಹಯೋಗದ ಸೋಲಾರ್ ಘಟಕ ಉದ್ಘಾಟನೆ
ಹೊಳಲ್ಕೆರೆ:
ನಿರಂತರ ಅಧ್ಯಯನ, ಸತತ ಪರಿಶ್ರಮ, ಏಕಾಗ್ರತೆಗಳಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಭಾರತೀಯ ಜೀವವಿಮಾ ನಿಗಮದ ಶಿವಮೊಗ್ಗ ವಿಭಾಗದ ವ್ಯವಸ್ಥಾಪಕ ನಾಗರಾಜ್ ಸಲಹೆ ನೀಡಿದರು.

ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿ ಬುಧವಾರ ಭಾರತೀಯ ಜೀವವಿಮಾ ನಿಗಮದ ಸಹಯೋಗದ ಸೋಲಾರ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. 

ರಾಘವೇಂದ್ರ ಸ್ವಾಮೀಜಿ ಬೆವರು ಹರಿಸಿ ಸ್ಥಾಪಿಸಿದ ಈ ಆಶ್ರಮದಲ್ಲಿ ಓದುವುದು ದೊಡ್ಡ ಪುಣ್ಯದ ಕೆಲಸ. ಇಲ್ಲಿನ ವಿದ್ಯಾರ್ಥಿಗಳು ಮುಂದೆ ದೊಡ್ಡ ಸಾಧನೆ ಮಾಡುವ ಮೂಲಕ ಆಶ್ರಮಕ್ಕೆ ಕೀರ್ತಿ ತರಬೇಕು. ಇಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು ಇನ್ನೂ ಆಶ್ರಮದ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದು, ಮುಂದೆ ಎಲ್ಲರೂ ಆಶ್ರಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಸೆಲ್ಕೋ ಸೋಲಾರ್ ಕಂಪೆನಿಯ ಸಹಾಯಕ ವ್ಯವಸ್ಥಾಪಕ ಮೋಹನ ಹೆಗಡೆ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಅಭಾವ ತಲೆದೋರಿದ್ದು, ಸೋಲಾರ್ ಲೈಟ್ ಬಳಸುವುದರಿಂದ ಸಮಸ್ಯೆ ನೀಗಿಸಬಹುದು ಎಂದು ಹೇಳಿದರು.

ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ ಮಾತನಾಡಿ, ಆಶ್ರಮ ಕ್ರಿಯಾಶೀಲ ಚಟುವಟಿಕೆಗಳಿಂದ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿಲಯಗಳಿಗೆ ಸ್ವಾವಲಂಬಿ ಬೆಳಕಿನ ವ್ಯವಸ್ಥೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಸೆಲ್ಕೋ ಕಂಪೆನಿಯ ಪ್ರಸನ್ನ ಹೆಗಡೆ, ರಾಜಶೇಖರ್, ಕವಿ ಚಂದ್ರಶೇಖರ ತಾಳ್ಯ, ಮಂಜುನಾಥ ಭಾಗವತ್, ಸಹಾಯಕ ಆಡಳಿತಾಧಿಕಾರಿಗಳಾದ ಕೆ.ಡಿ. ಬಡಿಗೇರ ಎಲ್.ಎಸ್. ಶಿವರಾಮಯ್ಯ ಇದ್ದರು.
ಬಿ.ಇಡಿ ಕಾಲೇಜು ಪ್ರಾಂಶುಪಾಲ ಎಸ್. ರವಿಶಂಕರ್ ಸ್ವಾಗತಿಸಿದರು. ಸಂತೋಷ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸುಬ್ರಾಯ ಭಟ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.