ADVERTISEMENT

ಉಳಿತಾಯಕ್ಕೆ ಒತ್ತು ನೀಡಲು ಸಲಹೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 9:15 IST
Last Updated 4 ಜುಲೈ 2012, 9:15 IST

ಚಳ್ಳಕೆರೆ: ಗ್ರಾಮೀಣ ಮಹಿಳೆಯರು ಸ್ವ- ಸಹಾಯ ಸಂಘ ರಚಿಸಿಕೊಂಡು ಸ್ವಯಂ ಉದ್ಯೋಗದ ಮೂಲಕ ಹಣ ಗಳಿಸಿ, ಉಳಿತಾಯ ಮಾಡಬೇಕು ಎಂದು ಶಾಸಕ ತಿಪ್ಪೇಸ್ವಾಮಿ ಮಹಿಳೆಯರಿಗೆ ಕಿವಿಮಾತು ಹೇಳಿದರು.

ಅವರು ತಾಲ್ಲೂಕಿನ ಸಾಣೀಕೆರೆ ಗ್ರಾಮದಲ್ಲಿ ಕೆಂಚಾಂಬ ಮಹಿಳಾ ಸಹಕಾರ ಸಂಘ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಮಹಿಳೆಯರಿಗಾಗಿ ಹತ್ತು ಹಲವು ಯೋಜನೆ ರೂಪಿಸಿದ್ದು, ಜತೆಗೆ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮಗಳ ರಸ್ತೆ, ಚರಂಡಿ, ಕುಡಿಯುವ ನೀರು, ನಿರುದ್ಯೋಗ ಯುವಕರಿಗೆ ತರಬೇತಿ ನೀಡುವ ಮೂಲಕ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸುವರ್ಣಗ್ರಾಮ ಯೋಜನೆ ಅಡಿಯಲ್ಲಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಉಪ ಕಸುಬುಗಳನ್ನು ಮಾಡುವುದು ಒಳಿತು ಎಂದರು.

ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸುವ ಕಡೆಗೆ ಗ್ರಾಮೀಣ ಮಹಿಳೆಯರು ಹೆಚ್ಚು ಗಮನಹರಿಸಬೇಕು. ವಿದ್ಯಾವಂತ ಮಕ್ಕಳಿಗೆ ಭವಿಷ್ಯದಲ್ಲಿ ಉತ್ತಮ ಜೀವನ ನಿರ್ವಹಣೆ ಮಾಡಲು ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಅಂತರರಾಷ್ಟ್ರೀಯಮಟ್ಟದಲ್ಲಿ ನಮ್ಮ ರಾಜ್ಯ ಮಹಿಳಾ ಸಂಘಗಳ ರಚನೆ ಹಾಗೂ ಉಳಿತಾಯ ಮಾಡುವಲ್ಲಿ ಉತ್ತಮ ಹೆಸರು ಗಳಿಸಿದೆ ಎಂದರು.

ರಾಜ್ಯ ಬಿಜೆಪಿ ಸರ್ಕಾರ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಹಲವು ತರಬೇತಿಗಳನ್ನು ನೀಡುತ್ತಿದೆ. ಮಹಿಳೆಯರು ಆರ್ಥಿಕವಾಗಿ ಮುಂದೆ ಬರಬೇಕಾದರೆ ಯೋಜನೆಗಳನ್ನು ಸೌಲಭ್ಯ ಬೆಳೆಸಿಕೊಳ್ಳಬೇಕು ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಆರ್. ಲಕ್ಷ್ಮೀಕಾಂತ್ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಗುಡಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಶೇಕಡ 40 ಪೈಸೆ ಬಡ್ಡಿ ದರದಲ್ಲಿ ್ಙ 5 ಲಕ್ಷ ದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಜಯಪಾಲಯ್ಯ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಕುಮಾರಸ್ವಾಮಿ ಮಾತನಾಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಹೇಮಲತಾ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಓಂಕಾರಮ್ಮ, ಬಿಜಿಪಿ ಮುಖಂಡ ಶಿಪುತ್ರಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಜೈರಾಂ, ತಿಪ್ಪೇಸ್ವಾಮಿ, ಗುರುಸಿದ್ದಮ್ಮ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಉಪ ನಿಬಂಧಕ ನರಸಿಂಹಮೂರ್ತಿ, ಮುರಳೀಧರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.