ADVERTISEMENT

ಎಲ್ಲ ಭರವಸೆಗಳನ್ನೂ ಈಡೇರಿಸಿರುವೆ

ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶಾಸಕ ಸುಧಾಕರ್

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 9:21 IST
Last Updated 22 ಮಾರ್ಚ್ 2018, 9:21 IST

ಹಿರಿಯೂರು: ‘ಹಿರಿಯೂರು ಕ್ಷೇತ್ರದಿಂದ ಮೂರನೇ ಬಾರಿಗೆ ಚುನಾವಣೆ ಎದುರಿಸಲು ಸಿದ್ಧತೆ ನಡೆಸಿದ್ದು, ಹಿಂದಿನ ಹತ್ತು ವರ್ಷಗಳಲ್ಲಿ ಜನರಿಗೆ ನೀಡಿದ್ದ ಎಲ್ಲಾ ಭರವಸೆಗಳನ್ನೂ ಈಡೇರಿಸಿರುವ ತೃಪ್ತಿ ನನಗಿದೆ’ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.

ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮತದಾರರ ಮುಂದೆ ಹೋಗಿ ನಿಮ್ಮೂರಿಗೆ ಇಂತಹ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸಿದ್ದೇನೆ. ನನಗೆ ಮತ್ತೊಮ್ಮೆ ಮತಕೊಡಿ ಎಂದು ಕೇಳುವ ನೈತಿಕತೆ ಉಳಿಸಿಕೊಂಡಿದ್ದೇನೆ.
ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವುದು ಬಹಳ ಕಾಲ ಉಳಿಯುವುದಿಲ್ಲ. ಅದರ ಅಗತ್ಯವೂ ನನಗಿಲ್ಲ. ಬದ್ಧತೆ, ಪ್ರಾಮಾಣಿಕತೆಯಿಂದ ಕ್ಷೇತ್ರದ ಕೆಲಸ ಮಾಡಿದ್ದೇನೆ. ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಯಾವುದೇ ರೀತಿಯ ಗಲಭೆ, ಅಶಾಂತಿಗೆ ಆಸ್ಪದ ಕೊಡದೇ ಕೆಲಸ ಮಾಡಿದ್ದೇನೆ. ಸರ್ಕಾರದಿಂದ ಬರುವ ಅನುದಾನವನ್ನು ಸಮಾನವಾಗಿ ಹಂಚಿಕೆ ಮಾಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ ನಾಲ್ಕು ಶಾಸಕರು ಆಯ್ಕೆಯಾಗಿದ್ದರು. ಈ ಬಾರಿ ಆರೂ ಶಾಸಕರು ಆಯ್ಕೆಯಾಗುವಂತಹ ಚುನಾವಣಾ ತಂತ್ರವನ್ನು ರೂಪಿಸಿದ್ದೇವೆ. ಬಿಜೆಪಿಗಿಂತ ಹೆಚ್ಚು ಸಮರ್ಥವಾಗಿ ಸಾಮಾಜಿಕ ಜಾಲತಾಣವನ್ನು ಬಳಕೆ ಮಾಡಿಕೊಂಡಿದ್ದೇವೆ’ ಎಂದರು.

‘ಚುನಾವಣೆಯಲ್ಲಿ ನಾವು ಜೆಡಿಎಸ್–ಬಿಜೆಪಿ ಪಕ್ಷಗಳನ್ನು ಟೀಕೆ ಮಾಡುವುದಕ್ಕಿಂತ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳನ್ನು ತಿಳಿಸಲು ಹೆಚ್ಚಿನ ಒತ್ತು ನೀಡಬೇಕು. ಪಕ್ಷದ ಸಾಧನೆ ತೋರಿಸಿ ಮತ ಕೇಳಬೇಕು. ಪಕ್ಷ ವಿರೋಧಿ ಚಟುವಟಿಕೆ ಮಾಡದೇ ನಿಷ್ಠೆಯಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಈರಲಿಂಗೇಗೌಡ, ಮುಖಂಡರಾದ ಅಪ್ಪಾಜಿಗೌಡ, ಖಾದಿ ರಮೇಶ್, ಎಸ್. ಚಂದ್ರಪ್ಪ,ಕಲ್ಲಟ್ಟಿ ತಿಪ್ಪೇಸ್ವಾಮಿ, ಕೆ. ಓಂಕಾರಪ್ಪ, ತಿಪ್ಪಮ್ಮ, ಜಗನ್ನಾಥ್, ಕಲ್ಲಟ್ಟಿ ಹರೀಶ್, ಗಿಡ್ಡೋಬನಹಳ್ಳಿ ಅಶೋಕ್, ಎನ್.ಡಿ. ಕುಮಾರ್, ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.