ADVERTISEMENT

ಏಳುಸುತ್ತಿನ ಕೋಟೆ ಸುತ್ತಾಡಿದ ಯದುವೀರ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 8:55 IST
Last Updated 2 ಏಪ್ರಿಲ್ 2018, 8:55 IST

ಚಿತ್ರದುರ್ಗ: ಮೈಸೂರು ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾನುವಾರ ಸಂಜೆ ಐತಿಹಾಸಿಕ ಏಳು ಸುತ್ತಿನ ಕೋಟೆಗೆ ಭೇಟಿ ನೀಡಿ, ಕೋಟೆಯೊಳಗಿನ ಐತಿಹಾಸಿಕ ತಾಣಗಳನ್ನು ವೀಕ್ಷಿಸಿ, ಕೋಟೆ ಗೈಡ್‌ಗಳಿಂದ ಮಾಹಿತಿ ಪಡೆದರು.ಇದೇ ಮೊದಲ ಬಾರಿಗೆ ಕೋಟೆಗೆ ಭೇಟಿ ನೀಡಿದ ಯದುವೀರ ಅವರಿಗೆ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ಗಿರೀಶ್ ಜತೆಯಾದರು. ಕಾಮನಬಾಗಿಲು ಮೂಲಕ ಕೋಟೆ ಪ್ರವೇಶಿಸಿ, ವಿವಿಧ ತಾಣಗಳನ್ನು ವೀಕ್ಷಿಸಿದರು. ಗಂಟೆ ಬಾಗಿಲಿನ ಬಳಿ ಗೋಡೆ ಏರುತ್ತಿದ್ದ ಜ್ಯೋತಿರಾಜನ ಸಾಹಸ ಕಂಡು ಬೆರಗಾದರು. ಜ್ಯೋತಿರಾಜ್ ‘ಒಲಿಂಪಿಕ್ಸ್‌ನಲ್ಲಿ ರಾಕ್‌ ಕ್ಲೈಬಿಂಗ್‌ ಸ್ಪರ್ಧೆಗೆ ಸ್ಪರ್ಧಿಗಳನ್ನು ತಯಾರು ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ರಾಜ’ನನ್ನು ಕಂಡ ಯುವಕ– ಯುವತಿಯರು, ಕೈಕುಲುಕಿ ಶುಭಾಶಯ ಕೋರಿದರು. ಕೆಲವರು ಅವರೊಂದಿಗೆ ‘ಸೆಲ್ಫಿ’ ತೆಗೆಸಿಕೊಂಡರು. ಫೋಟೊ ತೆಗೆದುಕೊಳ್ಳಲು ಮುಗಿಬಿದ್ದಾಗಲೂ ಬೇಸರಪಟ್ಟುಕೊಳ್ಳದ ಯದುವೀರ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದರು.  ನಂತರ ಕೋಟೆಯಲ್ಲಿರುವ ಗಣಪತಿ ಹಾಗೂ ಪಾಳೇಗಾರರ ಅಧಿದೇವತೆ ಏಕನಾಥೇಶ್ವರಿ ದರ್ಶನ ಪಡೆದರು.

ಈಗ ಕಾಲ ಕೂಡಿದೆ : ,‘ನಾನು ತುಂಬಾ ಸಲ ಕೋಟೆ ನೋಡಲು ಬರಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿಬಂದಿದೆ. ಈ ಭೇಟಿಯ ವೇಳೆಯಲ್ಲೇ ಕೋಟೆಯ ಇತಿಹಾಸ ತಿಳಿದುಕೊಂಡಿದ್ದೇನೆ’ ಎಂದು ಯದುವೀರ ಹೇಳಿದರು. ‘ ಈ ಜಿಲ್ಲೆಯಲ್ಲಿ ನಮ್ಮ ಅಜ್ಜಿಯವರ ಹೆಸರಿನಲ್ಲಿ ನಿರ್ಮಾಣ ಮಾಡಿರುವ ಗಾಯತ್ರಿ ಜಲಾಶಯ ಮತ್ತು ವಾಣಿವಿಲಾಸ ಜಲಾಶಯವೂ ಇದೆ. ಇದನ್ನೆಲ್ಲಾ ನೋಡಲು ನನಗೆ ಸಂತಸ ವಾಗುತ್ತಿದೆ’ ಎಂದರು.

ADVERTISEMENT

ನನ್ನ ದಾರಿಯಲ್ಲಿ ‘ರಾಜಕೀಯ’ವಿಲ್ಲ:ರಾಜಕೀಯ ಸೇರುವ ಕುರಿತು ಕೇಳಿದ ಪ್ರಶ್ನೆಗೆ, ‘ಜನರು ಬಯಸಿದರೆ, ಅವರಿಗೆ ಅನುಕೂಲ ಆಗುತ್ತದೆ ಎನ್ನುವುದಾದರೆ, ಮುಂದಿನ ದಿನಗಳಲ್ಲಿ ರಾಜಕೀಯದ ಯೋಚನೆ ಮಾಡುತ್ತೇನೆ. ಆದರೆ, ಸದ್ಯದ ನನ್ನ ಹಾದಿಯಲ್ಲಿ ರಾಜಕೀಯ ಇಲ್ಲ’ ಎಂದರು.

ಕೋಟೆ ಅಭಿವೃದ್ಧಿಯ ಚಿಂತನೆ :

ಚಿತ್ರದುರ್ಗದ ಈ ಏಳು ಸುತ್ತಿನ ಕೋಟೆಯನ್ನು ಅಭಿವೃದ್ದಿ ಪಡಿಸುವ ಬಗ್ಗೆ ನನಗೆ ಚಿಂತನೆ ಇದೆ. ಎಲ್ಲಾ ರಾಜಮನೆತನಗಳ ಐತಿಹಾಸಿಕ ಸ್ಥಳಗಳನ್ನು ಸಂಪರ್ಕಿಸುವ ಕಾರಿಡಾರ್ ಮಾಡಬೇಕೆಂಬ ಯೋಚನೆಯೂ ಇದೆ. ಅದರ ಜತೆಗೆ, ಪ್ರವಾಸಿಗರೂ ಇಂಥ ಸ್ಥಳಗಳ ಸ್ವಚ್ಛತೆ ಕಾಯ್ದುಕೊಳ್ಳಬೇಕು’ ಎಂದು ಯಧುವೀರ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.