ADVERTISEMENT

ಒಳ ಮೀಸಲಾತಿ ವಿರೋಧಿ ಹೇಳಿಕೆ: ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 7:10 IST
Last Updated 22 ನವೆಂಬರ್ 2017, 7:10 IST

ಚಿತ್ರದುರ್ಗ: ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸುವುದು ಬೇಡ ಎಂಬ ಶಾಸಕ ನರೇಂದ್ರಸ್ವಾಮಿ ಹೇಳಿಕೆ ಖಂಡಿಸಿ ಮಾದಿಗ ದಂಡೋರ ಜಿಲ್ಲಾ ಸಮಿತಿ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿ, ನರೇಂದ್ರ ಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.

ಬೆಳಗಾವಿ ಅಧಿವೇಶನದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸದಾಶಿವ ಆಯೋಗದ ವರದಿ ಜಾರಿ ವಿಷಯ ಪ್ರಸ್ತಾಪಿಸಿದ ಸಂದರ್ಭದಲ್ಲಿ ಅದನ್ನು ಅನುಷ್ಠಾನಕ್ಕೆ ತರುವುದು ಬೇಡ ಎಂದು ಶಾಸಕ ನರೇಂದ್ರಸ್ವಾಮಿ ಹೇಳುವ ಮೂಲಕ ಅನೇಕ ಮಾದಿಗ ಸಮುದಾಯದವರು ಈ ವಿಚಾರವಾಗಿ ಹೋರಾಟ ನಡೆಸಿಕೊಂಡು ಬಂದಿರುವುದಕ್ಕೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.

‘ನಾವು ಯಾವ ಪದವಿ ಕೇಳಿಲ್ಲ. ಪರಿಶಿಷ್ಟ ಜಾತಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗರೇ ಇದ್ದು, ನಮಗೆ ಸಿಗಬೇಕಾದ ಸೌಲಭ್ಯ ಕೊಡಿ ಎಂಬುದಾಗಿ ಕೇಳುತ್ತಿದ್ದೇವೆ. ಅದಕ್ಕೆ ವಿರೋಧ ವ್ಯಕ್ತಪಡಿಸುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕು. ನರೇಂದ್ರ ಸ್ವಾಮಿ ಅವರ ಮಾತನ್ನು ಕೇಳಿ ಅನುಷ್ಠಾನಕ್ಕೆ ತರದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಸಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ರವೀಂದ್ರ ಚಿಕ್ಕಾಲಘಟ್ಟ, ಪ್ರಧಾನ ಕಾರ್ಯದರ್ಶಿ ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಸುಲ್ತಾನಿಪುರ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ, ತಾಲ್ಲೂಕು ಘಟಕದ ಅಧ್ಯಕ್ಷ ಹಿರೇಕಬ್ಬಿಗೆರೆ ಕರಿಯಪ್ಪ, ಉಪಾಧ್ಯಕ್ಷ ಮಹಂತೇಶ್, ಪ್ರಧಾನ ಕಾರ್ಯದರ್ಶಿ ಜೆ.ಎನ್.ಕೋಟೆ ನಾಗರಾಜ್, ಪದಾಧಿಕಾರಿಗಳಾದ ಮಾರುತಿ, ಹನುಮಂತು, ಕಾಂತರಾಜ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.