ADVERTISEMENT

ಓಜೋನ್ ಪದರ ಸಂರಕ್ಷಣೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 8:35 IST
Last Updated 22 ಸೆಪ್ಟೆಂಬರ್ 2011, 8:35 IST

ಚಿತ್ರದುರ್ಗ: ಓಜೋನ್ ಪದರ ನಾಶಪಡಿಸಿದರೆ ಮಾನವನಿಗೆ ಆಪತ್ತು ಉಂಟಾಗಲಿದೆ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಸಹಪ್ರಾಧ್ಯಾಪಕ ಗೋಪಾಲ್ ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತುರುವನೂರು ಸರ್ಕಾರಿ ಪದವಿಪೂರ್ವ ಕಾಲೇಜು ಸಹಯೋಗದಲ್ಲಿ ತುರುವನೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಓಜೋನ್ ದಿನಾಚರಣೆಯಲ್ಲಿ ಮಾತನಾಡಿದರು.

ಓಜೋನ್ ಪದರ ಸೂರ್ಯನಿಂದ ಬರುವ ಹಾನಿಕಾರಕ ನೇರಳಾತೀತ ಕಿರಣಗಳನ್ನು ತಡೆದು ಭೂಮಿಯ ಮೇಲೆ ಜೀವರಾಶಿಗಳ ಉದಯಕ್ಕೆ ಕಾರಣವಾಯಿತು ಎಂದು ತಿಳಿಸಿದರು.

ವಿಜ್ಞಾನ ಕೇಂದ್ರದ ಎಸ್. ಮಲ್ಲಿಕಾರ್ಜುನಯ್ಯ ಮಾತನಾಡಿ, ಐಷಾರಾಮಿ ಜೀವನ ಪದ್ಧತಿಯಿಂದ ಮುಕ್ತರಾಗಿ ಓಜೋನ್ ಸಂರಕ್ಷಿಸಲು ಕರೆ ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪಪರಿಸರ ಅಧಿಕಾರಿ ರಾಜಶೇಖರ್ ಮಾತನಾಡಿದರು.
ಪ್ರಾಸ್ತಾವಿಕ ಮಾತನಾಡಿದ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಹಾಗೂ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಬಿ. ನಾಗೇಂದ್ರ ಚೌಧರಿ, ಓಜೋನ್ ದಿನಾಚರಣೆಯ ಮಹತ್ವ ಅರಿತು ಪ್ರತಿನಿತ್ಯ ಜನರು ಇದನ್ನು ಸಂರಕ್ಷಿಸುವಲ್ಲಿ ಸಫಲರಾಗಬೇಕು ಎಂದರು.

ತುರುವನೂರು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ  ಕೃಷ್ಣಕುಮಾರಿ, ಉಪ ಪ್ರಾಂಶುಪಾಲರಾದ ನಾಗರತ್ನಮ್ಮ, ವಿಜ್ಞಾನ ಶಿಕ್ಷಕಿ ಮಂಜುಳಾ ಹಾಜರಿದ್ದರು.

ಈ ಸಂದರ್ಭದಲ್ಲಿ `ಓಜೋನ್ ಸಂರಕ್ಷಣೆ ನಮ್ಮ ಹೊಣೆ~ ಕುರಿತ ವಿಷಯಕ್ಕೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಪಿಯು ವಿದ್ಯಾರ್ಥಿಗಳಾದ ಎಂ.ಎಚ್. ರಾಜೇಶ್, ಎಚ್.ಎಂ. ಮಂಜುನಾಥ್, ಎಚ್.ಎಲ್. ರಜನಿ, ಡಿ.ಎಸ್. ಪ್ರಿಯಾ, ಸಿಂಧೂರ ಅವರು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ಪಡೆದರು.

ಸೌಜನ್ಯಾ ಪ್ರಾರ್ಥಿಸಿದರು. ಉಪನ್ಯಾಸಕ ಶ್ರೀನಿವಾಸರೆಡ್ಡಿ ವಂದಿಸಿದರು. ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.

ಕಂಬಾರರಿಗೆ ಅಭಿನಂದನೆ
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರನ್ನು ಚಿತ್ರದುರ್ಗ ಬಯಲುಸೀಮೆ ಬರಹಗಾರರ ವೇದಿಕೆ ಅಭಿನಂದಿಸಿದೆ.

ಕಂಬಾರ ಅವರು ಕನ್ನಡದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಮಾಲತೇಶ್ ಅರಸ್, ಚಿಕ್ಕೋಬನಹಳ್ಳಿ ಮುರಾರ್ಜಿ, ಮೇಘ ಗಂಗಾಧರ ನಾಯ್ಕ ಮತ್ತಿತರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.