ADVERTISEMENT

ಕಂಚೀವರದರಾಜ ಸ್ವಾಮಿ ರಥೋತ್ಸವ

ಮೊಳಕಾಲ್ಮುರು; ಪೇಟೆ ಬಸವೇಶ್ವರ ಸ್ವಾಮಿ ರಥೋತ್ಸವ, ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಸಮರ್ಪಣೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 9:26 IST
Last Updated 26 ಏಪ್ರಿಲ್ 2013, 9:26 IST

ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಕಂಚೀಪುರ ಗ್ರಾಮದ ಕಂಚೀವರದರಾಜ ಸ್ವಾಮಿ  ರಥೋತ್ಸವವು ಸಹಸ್ರಾರು ಭಕ್ತರ ನೇತೃತ್ವದಲ್ಲಿ ವೈಭವಯುತವಾಗಿ ಗುರುವಾರ ನೆರವೇರಿತು.

ಮೊದಲು ಕಳಶ ಪೂಜೆ, ಈಡುಗಾಯಿ ಸೇವೆ, ಕುಂಕುಮ ಪೂಜೆ, ದೂಳೆಡೆ ಸೇವೆಗಳು ನಡೆದವು. ರಥವನ್ನು ಹೂವಿನ ಹಾರ ಹಾಗೂ ಬಣ್ಣದ ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ಕಂಚೀವರದರಾಜ ಸ್ವಾಮಿಯನ್ನು ಮೆರವಣಿಗೆಯ ಮೂಲಕ ಕರೆತಂದು ರಥದ ಮೇಲೆ ಕೂರಿಸಿದ ನಂತರ ಭಕ್ತರು ರಥಕ್ಕೆ ದುಡ್ಡು, ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು.

ಸಾವಿರಾರು ಭಕ್ತರು ಅಲಂಕೃತ ರಥವನ್ನು ಅಹಲ್ಯನಾಥ ಸ್ವಾಮಿ ದೇವಸ್ಥಾನದಿಂದ ತೇರಿನ ಮನೆಯ ವರೆಗೆ ಎಳೆದರು.ಸುಮಾರು ರೂ 10 ಲಕ್ಷ ಹಣವನ್ನು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರು ತೇರಿಗೆ ತೂರಿದರು.ರಥೋತ್ಸವದ ಬಳಿಕ ದೊಡ್ಡೆಡೆ ಸೇವೆ, ಪಾನಕ ಸೇವೆ, ಅನ್ನ ಸಂತರ್ಪಣೆ ನಡೆಯಿತು.

ಜಾತ್ರೆಯು ಇಡೀ ತಾಲ್ಲೂಕಿನಲ್ಲಿ ಬಹು ಪ್ರಖ್ಯಾತಿ ಪಡೆದಿದೆ. ಈ ರಥೋತ್ಸವದ ವಿಶೇಷ ಎಂದರೆ  ಕಂಚೀವರದರಾಜ ಸ್ವಾಮಿಯ ರಥೋತ್ಸವದ ದಿನ ಮಳೆ ಬರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಬಹಳ ಹಿಂದಿನ ಕಾಲದಿಂದಲೂ ಇದೆ. ಹಾಗೆಯೇ ಈ ವರ್ಷವೂ ಕೂಡ ರಥೋತ್ಸವದ ಹಿಂದಿನ ದಿನ ಹಾಗೂ ಮುಗಿದ ನಂತರ ತಾಲ್ಲೂಕಿನ ಹಲವೆಡೆ  ವರುಣನ ಸಿಂಚನವಾಗಿದ್ದು, ಭಕ್ತರಿಗೆ ಸಂತಸವನ್ನು ಉಂಟು ಮಾಡಿತು.ರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮದ ಸಹಸ್ರಾರು ಭಕ್ತರು ಆಗಮಿಸಿದ್ದರು.

ಬಸವೇಶ್ವರಸ್ವಾಮಿ ರಥೋತ್ಸವ
ಮೊಳಕಾಲ್ಮುರು:
ತಾಲ್ಲೂಕಿನ ಪ್ರಸಿದ್ಧ ರಥೋತ್ಸವಗಳಲ್ಲಿ ಒಂದಾದ ರಾಂಪುರ ಗ್ರಾಮದ ಪೇಟೆ ಬಸವೇಶ್ವರಸ್ವಾಮಿ ರಥೋತ್ಸವ ಗುರುವಾರ ಜರುಗಿತು.
ಪ್ರತೀವರ್ಷ ಹುಣ್ಣಿಮೆ ದಿನ ನಡೆಯುವ ರಥೋತ್ಸವ ಅಂಗವಾಗಿ ಬುಧವಾರ ಸಂಜೆ ದೇವಸ್ಥಾನ ಹಾಗೂ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗುರುವಾರ ಬೆಳಿಗ್ಗೆ ಸಮೀಪದ ಐತಿಹಾಸಿಕ ಜಟ್ಟಂಗಿ ರಾಮೇಶ್ವರ ಬೆಟ್ಟದಿಂದ ಮೆರವಣಿಗೆಯಲ್ಲಿ ಕರೆ ತರಲಾದ ರಾಮೇಶ್ವರ ಸ್ವಾಮಿಯನ್ನು ರಾಂಪುರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ಈಶ್ವರ ದೇವಸ್ಥಾನ ಆವರಣದಲ್ಲಿ ಕೂರಿಸಿ ಪೂಜೆ ಸಲ್ಲಿಸಲಾಯಿತು.

ಬಸವೇಶ್ವರ ಸ್ವಾಮಿ ದೇವಸ್ಥಾನ ಮುಂಭಾಗದಿಂದ ಆರಂಭವಾದ ರಥೋತ್ಸವ ಪಾದಗಟ್ಟೆವರೆಗೆ ಸಾಗಿ ವಾಪಾಸ್ ದೇವಸ್ಥಾನ ಬಳಿಗೆ ಬಂದಿತು. ರಥದ ಪಟಗಳ ಅಲಂಕಾರ, ಭಾರೀ ಹೂವಿನ ಹಾರಗಳ ಸಮರ್ಪಣೆ, ಪಟಾಕಿ ಸಿಡಿತ, ವಾದ್ಯಗಳ ಮೇಳ ಭಕ್ತರನ್ನು ಸೆಳೆಯಿತು. ರಥ ಸಾಗುವಾಗ ದಾರಿಯುದ್ದಕ್ಕೂ ಬಾಳೆಹಣ್ಣು, ಸೂರುಬೆಲ್ಲ, ಹೂವಿನ ಹಾರಗಳನ್ನು ಸಲ್ಲಿಸಿ ಭಕ್ತರು ಭಕ್ತಿ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.