ADVERTISEMENT

ಕಲಾಗ್ರಾಮ ಬಿ.ಜಿ. ಕೆರೆಗೆ ಸೌಲಭ್ಯದ್ದೇ ಕೊರತೆ

ಕೊಂಡ್ಲಹಳ್ಳಿ ಜಯಪ್ರಕಾಶ
Published 18 ಅಕ್ಟೋಬರ್ 2012, 8:10 IST
Last Updated 18 ಅಕ್ಟೋಬರ್ 2012, 8:10 IST

ರಂಗಭೂಮಿಯಲ್ಲಿ ಜಿಲ್ಲೆ ಹಾಗೂ ನೆರೆಯ ಜಿಲ್ಲೆಗಳಲ್ಲಿ ತನ್ನದೇ ಛಾಪು ಹೊತ್ತಿರುವ ಗ್ರಾಮ ಮೊಳಕಾಲ್ಮುರು ತಾಲ್ಲೂಕಿನ `ಬೊಮ್ಮಗೊಂಡನಕೆರೆ~ (ಬಿ.ಜಿ. ಕೆರೆ).

ಬೆಂಗಳೂರು-ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಗ್ರಾಮ ಅಂದಾಜು 2 ಸಾವಿರ ಮನೆಗಳನ್ನು ಹೊಂದಿದೆ. ಪರಿಶಿಷ್ಟ ಜಾತಿ, ನಾಯಕ, ಲಿಂಗಾಯತ, ಅಲ್ಪಸಂಖ್ಯಾತ, ಸವಿತಾ ಸಮಾಜದವರನ್ನು ಹೆಚ್ಚಾಗಿ ಹೊಂದಿರುವ ಈ ಗ್ರಾಮದಲ್ಲಿ 6,000-6,500 ಜನಸಂಖ್ಯೆ ಇದೆ. ಕೃಷಿ, ಕಮ್ಮಾರಿಕೆ ಗ್ರಾಮದ ಮುಖ್ಯ ಕಸುಬು.

ಕೆಲ ವರ್ಷಗಳ ಹಿಂದೆ ಎತ್ತಿನಗಾಡಿ, ಲಾಳ ತಯಾರಿಕೆಯಲ್ಲಿ ಹೆಚ್ಚು ಹೆಸರು ಮಾಡಿದ್ದ ಬಿ.ಜಿ. ಕೆರೆಯಲ್ಲಿ ಬೊಮ್ಮಯ್ಯ ಎಂಬ ನಾಯಕ ಜನಾಂಗದ ವ್ಯಕ್ತಿಯೊಬ್ಬ ಹಿಂದೆ ವಾಸವಿದ್ದನಂತೆ. ಈತ ಕೆರೆ ನಿರ್ಮಿಸಿದ. ಈ ಕಾರಣ ಗ್ರಾಮಕ್ಕೆ `ಬೊಮ್ಮಗೊಂಡನ ಕೆರೆ~ ಎಂದು ಹೆಸರು ಬಂದಿದೆ. ಇದು ನಂತರ ದಿನಗಳಲ್ಲಿ ಬಿ.ಜಿ. ಕೆರೆ ಆಯಿತು, ಗ್ರಾಮಕ್ಕೆ 4-5 ತಲೆಮಾರಿನ ಇತಿಹಾಸವಿದೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ರಾಮಾಂಜನೇಯಪ್ಪ ತಿಳಿಸುತ್ತಾರೆ.

ವಿವಿಧ ದೇವಸ್ಥಾನಗಳು

ಗ್ರಾಮದಲ್ಲಿ ಪ್ರಮುಖವಾಗಿ ಬಸವೇಶ್ವರ, ಆಂಜನೇಯ, ಮಾರಮ್ಮ, ಪೆನ್ನೋಬಳಸ್ವಾಮಿ, ದುರುಗಮ್ಮ ದೇವಸ್ಥಾನ, ಮಸೀದಿ, ಗಾದ್ರಿಪಾಲನಾಯಕ ದೇವಸ್ಥಾನ, ಕಾಳಮ್ಮ ದೇವಸ್ಥಾನಗಳು ಇವೆ. ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ನಡೆಯುವ ಬಸವೇಶ್ವರ ಸ್ವಾಮಿ ರಥೋತ್ಸವ ಪ್ರಮುಖವಾಗಿದೆ. ಜಿಲ್ಲಾ ಪಂಚಾಯ್ತಿ ನಿವೃತ್ತ ಮುಖ್ಯ ಯೋಜನಾಧಿಕಾರಿ ಬಿ.ಕೆ. ಮಂಜುನಾಥ್ ಕುಟುಂಬ ಇಲ್ಲಿ ಆಕರ್ಷಕ ಗಣೇಶ ದೇವಸ್ಥಾನ ನಿರ್ಮಿಸಿಕೊಟ್ಟಿದೆ.
ಗ್ರಾಮದಲ್ಲಿರುವ ಸೌಲಭ್ಯಗಳು

ಗ್ರಾಮದಲ್ಲಿ ಎರಡು ಸರ್ಕಾರಿ ಶಾಲೆಗಳು, ಒಂದು ಖಾಸಗಿ, ಸರ್ಕಾರಿ ಪ್ರೌಢಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆ, ಪೊಲೀಸ್ ಉಪ ಠಾಣೆ, ಹೆದ್ದಾರಿ ಸಾರಿಗೆ ಸೌಲಭ್ಯ, ಸರ್ಕಾರಿ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಹಾಲು ಶಿಥಲೀಕರಣ ಘಟಕ, ವಿದ್ಯುತ್ ವಿತರಣಾ ಕೇಂದ್ರ, ಗ್ರಾಮ ಪಂಚಾಯ್ತಿ ಕೇಂದ್ರವಿದೆ.

ಈ ಹಿಂದೆ, ಇಲ್ಲಿದ್ದ ಪಿಯು ಕಾಲೇಜನ್ನು ಮುಚ್ಚಲಾಗಿದ್ದು, ಈಗ ಇದರ ಅಗತ್ಯತೆ ತೀವ್ರವಾಗಿರುವ ಕಾರಣ ಕೂಡಲೇ ಸರ್ಕಾರಿ ಪಿಯು ಕಾಲೇಜು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ಯೋಗೇಶ್‌ಬಾಬು ಮನವಿ ಮಾಡುತ್ತಾರೆ.

ಗ್ರಾಮದಲ್ಲಿ ಸ್ವಚ್ಛತೆ ಕೊರತೆ ಹೆಚ್ಚಾಗಿದೆ. ಪರಿಶಿಷ್ಟ ಕಾಲೊನಿ, ಬಸವೇಶ್ವರ ಬಡಾವಣೆ ಸೇರಿದಂತೆ ವಿವಿಧೆಡೆ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲವಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಆದ್ದರಿಂದ `ಸುವರ್ಣ ಗ್ರಾಮ~ ಯೋಜನೆ ಸೌಲಭ್ಯ ಗ್ರಾಮಕ್ಕೆ ಕಲ್ಪಿಸಬೇಕು. ವಿದ್ಯುತ್ ಕೇಂದ್ರ ಇರುವ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಸೌಕರ್ಯ ನೀಡಬೇಕು ಎಂದು ಗ್ರಾಮಸ್ಥರು ಹೇಳುತ್ತಾರೆ.

`ಕಲಾಗ್ರಾಮ~ ಎಂದು ಹೆಸರು ಮಾಡಿರುವ ಬಿ.ಜಿ. ಕೆರೆ ರಂಗಭೂಮಿ ಕಲಾವಿದರ ಕೇಂದ್ರಬಿಂದು. ದಿ. ಘನೀಸಾಬ್ ಸ್ಥಾಪನೆ ಮಾಡಿರುವ `ಜಿವಿ ಡ್ರಾಮಾ ಸೀನರ್ಸ್‌~ ಇಂದಿಗೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಮದಲ್ಲಿ ಈಗಲೂ ವರ್ಷದುದ್ದಕ್ಕೂ ನಾಟಕಗಳು ನಡೆಯುತ್ತಲೇ ಇರುತ್ತವೆ. ಹೊಸ ಡ್ರಾಮಾ ಕಂಪೆನಿಗಳು ಇಲ್ಲಿ ಸ್ಥಾಪನೆಯಾಗಿ ಸುತ್ತಮುತ್ತಲಿನ ಗ್ರಾಮಗಳಿಗೆ ನಾಟಕ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿವೆ.

ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿಯೇ ರಂಗಮಂಟಪ ನಿರ್ಮಾಣಕ್ಕೆ ಸ್ಥಳ ಕಾಯ್ದಿರಿಸಲಾಗಿದ್ದು, ಮಂಪಟ ನಿರ್ಮಾಣವಾಗದ ಪರಿಣಾಮ ಕೊಳಚೆ ನೀರು ನಿಂತು ಹಂದಿ, ಸಾಂಕ್ರಾಮಿಕ ರೋಗಗಳ ತಾಣವಾಗಿ ಪರಿಣಮಿಸಿದೆ. ಶೀಘ್ರವೇ ಇಲ್ಲಿ ರಂಗಮಂಟಪ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಲಾ ಆಸಕ್ತರು ಹೇಳುತ್ತಾರೆ.

ಕುಶಲಕರ್ಮಿಗಳ ತವರು
ಗ್ರಾಮದಲ್ಲಿ 35-40 ವಿಶ್ವಕರ್ಮ ಮತ್ತು ಅಲ್ಪಸಂಖ್ಯಾತ ಜನಾಂಗಕ್ಕೆ ಸೇರಿದ ಕುಶಲಕರ್ಮಿಗಳ ಮನೆಗಳು ಇವೆ. ಈ ಕುಟುಂಬಗಳು ಪ್ರಮುಖವಾಗಿ ಕಮ್ಮಾರಿಕೆ, ಲಾಳ, ಎತ್ತಿನ ಬಂಡಿ ತಯಾರಿಕೆ ನೆಚ್ಚಿಕೊಂಡಿವೆ. ಲಾಳ ತಯಾರಿಕೆ ಇಲ್ಲಿ ಹೆಚ್ಚಾಗಿ ನಡೆಯುತ್ತಿದ್ದು, ಕಾರ್ಮಿಕರ ಆರ್ಥಿಕ, ವಿಮಾ ಸೌಲಭ್ಯಗಳು, ಕಚ್ಛಾ ಕಬ್ಬಿಣ ವ್ಯವಸ್ಥೆ, ಮಾರುಕಟ್ಟೆ ಸೌಲಭ್ಯ, ಜನಾಂಗಕ್ಕೆ ಶಿಕ್ಷಣ ಸೌಲಭ್ಯ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ಬಿ.ಕೆ. ಮುರಳೀಧರ್ ಮತ್ತು ಎಸ್.ಎಫ್. ಷಫೀವುಲ್ಲಾ ಆಗ್ರಹಿಸುತ್ತಾರೆ.

ಕಮ್ಮಾರರಿಗೆ ಶೆಡ್ಡುಗಳನ್ನು ನಿರ್ಮಿಸಿಕೊಟ್ಟಿದ್ದರೂ ಇನ್ನೂ ಕೆಲವು ಫಲಾನುಭವಿಗಳು ಇದರಿಂದ ವಂಚಿತರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕು ಎಂದು ಗ್ರಾಮಸ್ಥರು ಕೋರುತ್ತಾರೆ.

ಕೃಷಿ ಕ್ಷೇತ್ರ
ಇಲ್ಲಿನ ವಸುಂಧರಾ ಸಸ್ಯಕ್ಷೇತ್ರ ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು, ಸಾವಯವ ಕೃಷಿ, ಕುರಿ-ಮೇಕೆ ಸಾಗಣೆ ಇನ್ನಿತರ ಚಟುವಟಿಕೆಗಳಿಗೆ ಹೆಸರು ಪಡೆದಿದೆ. ತಿಪ್ಪೇಸ್ವಾಮಿ ಅವರ `ಲಕ್ಷ್ಮೀ ಹೈಟೆಕ್ ಸಸ್ಯಕ್ಷೇತ್ರ~ ಸಹ ತೋಟಗಾರಿಕೆ ಇಲಾಖೆ ಮಾನ್ಯತೆ ಪಡೆದು ಕೃಷಿ ಜ್ಞಾನ ಪ್ರಚಾರ ಮಾಡುತ್ತಿದೆ.

ಇಲ್ಲಿ ರೇಷ್ಮೆ ಕೃಷಿ ಗಮನಾರ್ಹವಾಗಿದ್ದರೂ ಇಲ್ಲಿಯೇ ಸ್ಥಾಪನೆ ಮಾಡಿದ್ದ ರೇಷ್ಮೆಗೂಡು ಮಾರಾಟ ಕೇಂದ್ರ ತಾಂತ್ರಿಕ ಕಾರಣದಿಂದಾಗಿ ಮುಚ್ಚಿ ಹೋಗಿರುವುದು ದುರಂತ ಎಂದು ಬೆಳೆಗಾರರು ಹೇಳುತ್ತಾರೆ. ರಾಜ್ಯದ ಪ್ರಮುಖ ರೇಷ್ಮೆಗೂಡು ಮಾರುಕಟ್ಟೆಯಾದ ರಾಮನಗರ ಮಾರುಕಟ್ಟೆಯಲ್ಲಿ ಬಿ.ಜಿ. ಕೆರೆ ಗೂಡಿಗೆ ಪ್ರಥಮ ಆದ್ಯತೆ ಇದೆ ಗ್ರಾಮಸ್ಥರು ಹೆಮ್ಮೆಯಿಂದ ಹೇಳುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.