ADVERTISEMENT

ಕಾಂಕ್ರಿಟ್ ರಸ್ತೆಗೆ ರೂ 30 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2012, 6:00 IST
Last Updated 25 ಜೂನ್ 2012, 6:00 IST

ಹೊಳಲ್ಕೆರೆ: ಮುಂದಿನ ಒಂದು ವರ್ಷದಲ್ಲಿ ಹಳ್ಳಿಗಳಲ್ಲಿ ರೂ 30 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.ತಾಲ್ಲೂಕಿನ ಗಂಜಿಗಟ್ಟೆಯಲ್ಲಿ ಭಾನುವಾರ ರೂ 10 ಲಕ್ಷ ವೆಚ್ಚದ ವಾಲ್ಮೀಕಿ ಭವನ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ಶಾಸಕನಾದಾಗ ಇಡೀ ತಾಲ್ಲೂಕಿನಲ್ಲಿ ಉತ್ತಮ ರಸ್ತೆಗಳೇ ಇರಲಿಲ್ಲ. ಆದ್ದರಿಂದ ರಸ್ತೆ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ, ಹೆಚ್ಚಿನ ಅನುದಾನ ರಸ್ತೆ ನಿರ್ಮಾಣಕ್ಕಾಗಿ ಬಳಸಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲಿ ರಸ್ತೆಗಳ ಅಭಿವೃದ್ಧಿಗಾಗಿಯೇ ಸುಮಾರು ರೂ 300 ಕೋಟಿ ಖರ್ಚು ಮಾಡಲಾಗಿದೆ.

ಭರಮಸಾಗರ ಸೇರಿ ಈ ಕ್ಷೇತ್ರದಲ್ಲಿ 493 ಹಳ್ಳಿಗಳಿದ್ದು, ಈಗ ಪ್ರತಿ ಗ್ರಾಮದಲ್ಲೂ ಒಂದಿಲ್ಲೊಂದು ರಸ್ತೆ ನಿರ್ಮಿಸಲಾಗಿದೆ. ತಾಲ್ಲೂಕಿನ ಗಡಿಗ್ರಾಮ ಬಂಡೆ ಬೊಮ್ಮೇನಹಳ್ಳಿಯಿಂದ ರಾಜ್ಯ ಹೆದ್ದಾರಿ-47ರಲ್ಲಿ ರಸ್ತೆ ಅಭಿವೃದ್ಧಿಪಡಿಸಲು ರೂ 25 ಕೋಟಿ ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಚಿಕ್ಕಜಾಜೂರು ಗ್ರಾಮದ ಮುಖ್ಯರಸ್ತೆಯನ್ನು ರೂ 4 ಕೋಟಿ ವೆಚ್ಚದಲ್ಲಿ ಸುಮಾರು 100 ಅಡಿ ವಿಸ್ತರಿಸಲಾಗಿದೆ. ಈ ಭಾಗದ ಮುತ್ತಗದೂರು ಕೆರೆಗೆ ರೂ 1 ಕೋಟಿ, ಕಾಗಳಗೆರೆ ಕೆರೆಗೆ ರೂ 1 ಕೋಟಿ, ಅಂದನೂರು ಕೆರೆಗೆ ರೂ 80 ಲಕ್ಷ ವೆಚ್ಚಮಾಡಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

65 ವರ್ಷಗಳನ್ನು ರಾಜಕಾರಣಿಗಳ ಆಶ್ವಾಸನೆಗಳಲ್ಲೇ ಕಳೆದಿದ್ದೇವೆ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ಮತದಾರರು ಕೆಲವು ನಿರೀಕ್ಷೆಗಳನ್ನು ಇಟ್ಟುಕೊಂಡು ಜನಪ್ರತಿನಿಧಿಗಳನ್ನು ಆರಿಸುತ್ತಾರೆ. ಅವರ ಕನಿಷ್ಠ ನಿರೀಕ್ಷೆಗಳನ್ನಾದರೂ, ಈಡೇರಿಸುವ ಜವಾಬ್ದಾರಿ ರಾಜಕಾರಣಿಗೆ ಇರಬೇಕು.

ರಸ್ತೆ ವಿಸ್ತರಣೆ, ಹೊಸ ಕಟ್ಟಡಗಳ ನಿರ್ಮಾಣ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಅನೇಕ ಅಡೆತಡೆಗಳು ಎದುರಾಗುತ್ತವೆ. ಆದರೆ, ಒಬ್ಬಿಬ್ಬರ ವೈಯಕ್ತಿಕ ಹಿತಾಸಕ್ತಿಗಳಿಗೆ ಮಣಿದು ಸಾರ್ವಜನಿಕ ಕೆಲಸ ನಿಲ್ಲಿಸುವ ಜಾಯಮಾನ ನನ್ನದಲ್ಲ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಓಂಕಾರಸ್ವಾಮಿ ಮಾತನಾಡಿ, ಶಾಸಕರು ರೂ 500 ಕೋಟಿ ಅನುದಾನ ತಂದಿದ್ದಾರೆ. ಅಭಿವೃದ್ಧಿ ಕಾರ್ಯ ನೋಡಿ, ಮೆಚ್ಚುಗೆ ವ್ಯಕ್ತಪಡಿಸಬೇಕೇ ಹೊರತು, ಕಾಲೆಳೆಯಬಾರದು. ಮುಂದಿನ ದಿನಗಳಲ್ಲಿ ಜಾತಿ, ಪಕ್ಷ ನೋಡದೆ ಉತ್ತಮ ವ್ಯಕ್ತಿಯನ್ನು ಬೆಂಬಲಿಸಬೇಕು ಎಂದು ಹೇಳಿದರು.
ರೂ 75 ಲಕ್ಷ ವೆಚ್ಚದ ಚಿಕ್ಕಜಾಜೂರು- ಕಾವಲು, ರೂ 10 ಲಕ್ಷ ವೆಚ್ಚದ ಗ್ಯಾರಹಳ್ಳಿ ವಡ್ಡರಹಟ್ಟಿಯ ಕಾಂಕ್ರಿಟ್ ರಸ್ತೆ ಉದ್ಘಾಟಿಸಲಾಯಿತು.

ಡಿ.ಸಿ. ಮೋಹನ್, ಎಪಿಎಂಸಿ ಅಧ್ಯಕ್ಷ ಬಸವಂತಪ್ಪ, ನಿರ್ದೇಶಕ ಮರುಳಸಿದ್ದಪ್ಪ, ರಮೇಶ ನಾಯ್ಕ, ಪಾಲಪ್ಪ, ನಾಗಪ್ಪ, ಹಾಲೇಶ್, ಅಚ್ಚತಾನಂದ, ಮಹಮದ್ ಸಾಬ್, ದಯಾನಂದ್, ಆಂಜನಪ್ಪ, ಜಮೀರ್ ಬಾಷಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.