ADVERTISEMENT

ಕುಡಿಯುವ ನೀರಿನಲ್ಲೂ ವರ್ಗಭೇದ

ದಿ ಎಸ್. ನಿಜಲಿಂಗಪ್ಪ ಅವರ 110ನೇ ಜಯಂತಿಯಲ್ಲಿ ಎಚ್.ಕೆ. ಪಾಟೀಲ್ ವಿಷಾದ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 11:12 IST
Last Updated 11 ಡಿಸೆಂಬರ್ 2012, 11:12 IST

ಚಿತ್ರದುರ್ಗ: ಕುಡಿಯುವ ನೀರಿನಲ್ಲೂ ಇಂದು ಸಮಾನತೆ ಇಲ್ಲ. ಶ್ರೀಮಂತ ಮತ್ತು ಬಡ ವರ್ಗಗಳು ಸೃಷ್ಟಿಯಾಗಿವೆ. ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಸಮಾನತೆ ತರಲು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಪ್ರತಿಪಾದಿಸಿದರು.

ತಾಲ್ಲೂಕಿನ ಸೀಬಾರ ಬಳಿಯ ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ಸೋಮವಾರ ಎಸ್. ನಿಜಲಿಂಗಪ್ಪ ಮೆಮೊರಿಯಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ದಿ ಎಸ್. ನಿಜಲಿಂಗಪ್ಪ ಅವರ 110ನೇ ಜಯಂತಿ ಸಮಾರಂಭದ ಅಂಗವಾಗಿ `ಜನ ಜಲ' ವಿಷಯವಾಗಿ ಅವರು ಮಾತನಾಡಿದರು.

ದೇಶದಲ್ಲಿ ಇಂದು ಎರಡು ವರ್ಗಗಗಳಾಗಿವೆ. ಬಡವರು ಅಶುದ್ಧ ನೀರು ಕುಡಿಯುತ್ತಿದ್ದು, ಅದೇ ಅವರಿಗೆ ಶತ್ರುವಾಗಿದೆ. ಆದರೆ, ಶ್ರೀಮಂತರು ಪ್ರತಿ ಲೀಟರ್ ಖನಿಜಯುಕ್ತ ನೀರಿಗೆರೂ 15 ನೀಡುತ್ತಾರೆ. ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲೂ ಇಂದಿಗೂ ಕಲುಷಿತವಾಗಿರುವ ಕೆರೆಯ ನೀರನ್ನು ಜನರು ಕುಡಿಯುತ್ತಾರೆ. ಜನರಿಗೆ ಅನ್ಯಾಯ ಮಾಡಿ ಇಂತಹ ಪರಿಸ್ಥಿತಿ ತಂದ ಜನಪ್ರತಿನಿಧಿಗಳು ತಲೆತಗ್ಗಿಸಬೇಕಾಗಿದೆ ಎಂದು ನುಡಿದರು.

ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿರುವ ವರ್ಗ ಅಶುದ್ಧ ನೀರು ಕುಡಿಯುತ್ತಿದೆ. ಫ್ಲೋರೈಡ್, ಅರ್ಸೆನಿಕ್ ಮುಂತಾದ ವಿಷಪೂರಿತ ರಾಸಾಯನಿಕಗಳಿರುವ ಕಲುಷಿತ ನೀರನ್ನು ಬಹುಸಂಖ್ಯೆಯ ಜನ ಸೇವಿಸುತ್ತಿರುವುದು ದುರಂತದ ಸಂಗತಿ. ಕಲುಷಿತ ನೀರಿನಿಂದ ಪ್ರತಿ ಸೆಕೆಂಡಿಗೆ ಒಂದು ಮಗು ಸಾವನ್ನಪ್ಪುತ್ತಿದೆ. ದೇಶದಲ್ಲಿ ಪ್ರತಿ ವರ್ಷ 15 ಲಕ್ಷ ಮಕ್ಕಳು ಅಶುದ್ಧ ನೀರಿನಿಂದ ಸಾವಿಗೀಡಾಗುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಶೇ 50ರಷ್ಟು ರೋಗಿಗಳು ಕಲುಷಿತ ನೀರಿನಿಂದಲೇ ಅಸ್ವಸ್ಥರಾಗಿ ದಾಖಲಾಗಿದ್ದಾರೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.

ಇಂತಹ ಸನ್ನಿವೇಶದಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸುವ ಮೂಲಕ ಸಮಾನತೆ ತರಬೇಕಾಗಿದೆ. ಸರ್ಕಾರಗಳು ಸಹ ಸಮಸ್ಯೆ ಇದ್ದಲ್ಲಿ ಟ್ಯಾಂಕರ್ ಅಥವಾ ಕೊಳವೆಬಾವಿ ಮೂಲಕ ನೀರು ಪೂರೈಸಲು ಸೂಚಿಸುತ್ತದೆ ಹೊರತು ಶುದ್ಧ ಕುಡಿಯುವ ನೀರು ಪೂರೈಸುವಂತೆ ಇದುವರೆಗೆ ಸೂಚನೆ ನೀಡಿದ ಉದಾಹರಣೆಗಳಿಲ್ಲ.

ಆದ್ದರಿಂದ, ದೇಶದ ಪ್ರಧಾನಿ ಯಾವ ಗುಣಮಟ್ಟದ ನೀರು ಕುಡಿಯುತ್ತಾನೋ ಅದೇ ಗುಣಮಟ್ಟದ ಕುಡಿಯುವ ನೀರನ್ನು ಸಮಾಜದ ಕಟ್ಟಕಡೆಯ ಬಡವನಿಗೂ ದೊರೆಯಬೇಕು. ಗುಣಮಟ್ಟದ ಶುದ್ಧ ಕುಡಿಯುವ ನೀರು ಪೂರೈಸುವುದು ಸಂವಿಧಾನದ ಪ್ರಕಾರ ಮೂಲಹಕ್ಕು ಆಗಬೇಕು. ಎಲ್ಲ ರಾಜಕೀಯ ಪಕ್ಷಗಳು ಸಹ ಈ ವಿಷಯವನ್ನು ಜವಾಬ್ದಾರಿಯಿಂದ ತೆಗೆದುಕೊಳ್ಳಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಶುದ್ಧ ಕುಡಿಯುವ ನೀರು ಒಂದು ವಿಷಯವಾಗಲಿದೆ ಎಂದು ಎಚ್.ಕೆ. ಪಾಟೀಲ್ ವಿವರಿಸಿದರು.

ಎಸ್. ನಿಜಲಿಂಗಪ್ಪ ಅವರ ಆದರ್ಶಮಯ ಬದುಕಿನ ಕುರಿತು ಪ್ರಸ್ತಾಪಿಸಿದ ಅವರು, ಎಸ್ಸೆನ್ ಮಕ್ಕಳನ್ನು ದುಡ್ಡಿನ ವ್ಯಾಮೋಹದಿಂದ ದೂರವಿಟ್ಟರು. ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿ ಮಾಡಿದರು. ಆದರೆ, ಇಂದು ಪರಿಸ್ಥಿತಿ ವಿರುದ್ಧವಾಗಿದೆ. ಶಾಸಕಾಂಗ ಸಭೆಯ 100ರಲ್ಲಿ 50 ಜನ ಅಪರಾಧದ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಸಂಪುಟದಲ್ಲಿನ 10-12ಜನ ಜೈಲಿನಲ್ಲಿದ್ದಾರೆ ಅಥವಾ ಜೈಲಿನ ಹೊರಗಿದ್ದು, ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ಮೌಲ್ಯಗಳನ್ನು ಅಳವಡಿಸಿಕೊಳ್ಳದಿದ್ದರೆ ಕಲ್ಯಾಣ ಕರ್ನಾಟಕದ ಕನಸು ನನಸಾಗುವುದು ಸಾಧ್ಯವಿಲ್ಲ ಎಂದು ನುಡಿದರು.

ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ನಿಜಲಿಂಗಪ್ಪ ಅವರು ಕೇವಲ ಅಧಿಕಾರ, ಹಣಕ್ಕಿಂತ ಆದರ್ಶದ ಮೂಲಕ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿದರು. ಆದರ್ಶದ ರಾಜಕಾರಣದ ಮೂಲಕ ಇತಿಹಾಸವಾಗಿ ಉಳಿದರು ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ `ಸಾಧ್ವಿ ಮುರಿಗೆಮ್ಮ' ಪುಸ್ತಕ ಬಿಡುಗಡೆ ಮಾಡಿದರು. ಮಾಜಿ ಸಂಸದ ಎಚ್. ಹನುಮಂತಪ್ಪ, ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಚಲನಚಿತ್ರ ನಟ ಮದನ್‌ಮಲ್ಲು ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.