ADVERTISEMENT

ಕೃಷಿ ಜಾಗೃತಿ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:24 IST
Last Updated 26 ಡಿಸೆಂಬರ್ 2012, 5:24 IST

ಚಳ್ಳಕೆರೆ: ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಸಮಗ್ರ ಮಾಹಿತಿಯನ್ನು ತಿಳಿಯ ಪಡಿಸುವ ಉದ್ದೇಶದಿಂದ ಎಲ್ಲಾ ಹಳ್ಳಿಗಳಿಗೂ ಮಾಹಿತಿಯನ್ನು ನೀಡುವ ಸಲುವಾಗಿ ಕೃಷಿ ಜಾಗೃತಿ ಆಂದೋಲನ ಆಯೋಜಿಸಲಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಡಾ.ಜಿ.ಎಸ್. ಸ್ಫೂರ್ತಿ ಹೇಳಿದರು.

ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಗುರುವಾರ ಕೃಷಿ ಜಾಗೃತಿ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ಎರಡು ದಿನಗಳ ಕಾಲ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕೃಷಿ ಜಾಗೃತಿ ಆಂದೋಲನದ ವಾಹನ ಸಂಚರಿಸಲಿದೆ. ಧ್ವನಿವರ್ದಕದ ಮೂಲಕ ಎಲ್ಲಾ ಹಳ್ಳಿಗಳ ರೈತರನ್ನು ಒಟ್ಟುಗೂಡಿಸಿ ಬೇಸಿಗೆ ಹಂಗಾಮಿಗೆ ಶೇಂಗಾ ಬಿತ್ತನೆಯ ವಿಧಾನ ಸೇರಿದಂತೆ ಸಮಗ್ರ ಕೃಷಿ ಮಾಹಿತಿ ನೀಡಲಾಗುವುದು ಎಂದು ಹೇಳಿದರು.

ಪ್ರತಿ ಹೋಬಳಿಮಟ್ಟದ ಹಳ್ಳಿಗಳಿಗೂ ಇದು ಸಂಚರಿಸಲಿದೆ. ನಂತರ, ಡಿ. 22ರಂದು ಶನಿವಾರ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ರೈತರಿಗಾಗಿ ಮಾಹಿತಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ಇಂತಹ ವಸ್ತು ಪ್ರದರ್ಶನಕ್ಕೆ ಎಲ್ಲಾ ರೈತರು ಆಗಮಿಸಿ ಇಲಾಖೆಯ ಅನೇಕ ಯೋಜನೆಗಳು, ವಿಧಾನಗಳನ್ನು ತಿಳಿದುಕೊಳ್ಳಬೇಕು ಎಂದು ವಿವರಿಸಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ. ರವಿಕುಮಾರ್ ಮಾತನಾಡಿ, ರೈತರ ಅನುಕೂಲಕ್ಕೆ ಕೃಷಿ ಇಲಾಖೆ ಇಂತಹ ಜಾಗೃತಿ ಆಂದೋಲನವನ್ನು ಆಯೋಜಿಸಿದೆ. ಆದ್ದರಿಂದ, ರೈತರು ಸಂಪೂರ್ಣವಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿದರು.ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಿ.ಟಿ. ತಿಪ್ಪೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಎ. ಅನಿಲ್ ಕುಮಾರ್, ಕೃಷಿ ತಾಂತ್ರಿಕ ಅಧಿಕಾರಿ ಡಾ.ರವಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.