ADVERTISEMENT

ಕೇಂದ್ರ ಸಚಿವ ಮೊಯಿಲಿಗೆ ಸಂಸದರಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 5:05 IST
Last Updated 12 ಮಾರ್ಚ್ 2011, 5:05 IST

ಉಡುಪಿ: ದೇಶದಾದ್ಯಂತ ಸುಮಾರು 25 ಲಕ್ಷದಷ್ಟಿರುವ ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಉಡುಪಿ -ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸಂಸದರು ಶುಕ್ರವಾರ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ.ನವದೆಹಲಿಯಲ್ಲಿ ಅಡಿಕೆ ಬೆಳೆಗಾರರ ಮಾರುಕಟ್ಟೆ ಸೊಸೈಟಿ ನಿಯೋಗದ ಜತೆ ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಮೊಯಿಲಿ ಅವರನ್ನು ಭೇಟಿ ಮಾಡಿದ ಸಂಸದರಾದ ಸದಾನಂದ ಗೌಡ ಹಾಗೂ ಬಿ.ವೈ. ರಾಘವೇಂದ್ರ ಮನವಿ ಸಲ್ಲಿಸಿದರು.

ಕರ್ನಾಟಕ, ಕೇರಳ, ಗೋವಾ, ಅಸ್ಸಾಂ, ಪಶ್ಚಿಮ ಬಂಗಾಳ ಸಹಿತ ಹಲವು ರಾಜ್ಯಗಳ ಪ್ರಧಾನ ತೋಟಗಾರಿಕಾ ಬೆಳೆಯಾಗಿರುವ ಅಡಿಕೆ ದೇಶದಲ್ಲಿ ವರ್ಷಕ್ಕೆ ಸುಮಾರು 6 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಉತ್ಪಾದನೆಯಾಗುತ್ತಿದೆ. ಇದರ ಮುಕ್ಕಾಲು ಭಾಗಕ್ಕಿಂತಲೂ ಜಾಸ್ತಿ ಪ್ರಮಾಣದಲ್ಲಿ ಗುಟ್ಕಾ ಕೈಗಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಈಗಾಗಲೇ ಹಳದಿ ರೋಗ, ಬೆಲೆ ಕುಸಿತ ಮತ್ತಿತರ ಸಮಸ್ಯೆಗಳಿಂದಾಗಿ ಕಂಗೆಟ್ಟಿರುವ ಅಡಿಕೆ ಬೆಳೆಗಾರರು ಕೇಂದ್ರದ ಹೊಸ ನೀತಿಯಿಂದ ಸಂಪೂರ್ಣ ಧೃತಿಗೆಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿರುವ, ಗುಟ್ಕಾ ಉತ್ಪನ್ನಗಳನ್ನು ಪ್ಲಾಸ್ಟಿಕ್ ಸ್ಯಾಷೇಗಳಲ್ಲಿ ಮಾರಾಟ ಮಾಡುವ ಪ್ಲಾಸ್ಟಿಕ್ ನಿಷೇಧ ಕಾಯ್ದೆಯ ಅನ್ವಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕ್ವಿಂಟಲ್ ಒಂದಕ್ಕೆ ನಾಲ್ಕು ಸಾವಿರ ರೂಪಾಯಿಗಳಷ್ಟು ಕುಸಿತ ಕಂಡಿದೆ. ಹೀಗಾಗಿ, ಅಡಿಕೆ ಮಾರುಕಟ್ಟೆಯೇ ಸ್ಥಗಿತಗೊಂಡಿದೆ. ಯಾರೊಬ್ಬರೂ ಅಡಿಕೆ ಖರೀದಿಗೆ ಮುಂದೆ ಬರುತ್ತಿಲ್ಲ. ಹೀಗಾಗಿ ಅಡಿಕೆ ಬೆಳೆಯುವ ಕುಟುಂಬಗಳು ಅಪಾಯ ಎದುರಿಸುತ್ತಿವೆ. ಗುಟ್ಕಾ ಮಾರಾಟಕ್ಕೆ ಪರ್ಯಾಯ ಸ್ಯಾಷೇನ ವ್ಯವಸ್ಥೆಯಾಗುವ ತನಕ ಈ ಆದೇಶ ಮುಂದೂಡಬೇಕು ಎಂದು ಸಂಸದರು ಕೇಂದ್ರವನ್ನು ಒತ್ತಾಯಿಸಿದರು.

ಕೆಂಪಡಿಕೆಗೆ ಕಿಲೋ ಒಂದಕ್ಕೆ ರೂ 148 ಮತ್ತು ಬಿಳಿ ಅಡಿಕೆಗೆ ಕಿಲೋ ಒಂದಕ್ಕೆ ್ಙ 114 ಉತ್ಪಾದನಾ ವೆಚ್ಚ ತಗಲುತ್ತದೆ ಎಂದು ತಜ್ಞರ ವರದಿ ದೃಢಪಡಿಸಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ತಕ್ಷಣದಿಂದಲೇ ಅಡಿಕೆಗೆ ಬೆಂಬಲ ಬೆಲೆ ನೀಡಬೇಕು. ಅಲ್ಲದೇ ಈ ಬಾರಿಯ ಪೂರಕ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು. ಕನಿಷ್ಠ ಒಂದು ವರ್ಷವಾದರೂ ಕೇಂದ್ರದ ಆದೇಶ ತಡೆಹಿಡಿದು ಅಡಿಕೆ ಬೆಳೆಗಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾಗಿ ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.