ADVERTISEMENT

ಕೋಟೆ ಅಭಿವೃದ್ಧಿ ಪ್ರಾಧಿಕಾರ, ಕೆರೆಗಳ ಜೋಡಣೆಗೆ ಆದ್ಯತೆ

ಜಿಲ್ಲಾ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್

​ಪ್ರಜಾವಾಣಿ ವಾರ್ತೆ
Published 6 ಮೇ 2018, 9:33 IST
Last Updated 6 ಮೇ 2018, 9:33 IST

ಚಿತ್ರದುರ್ಗ: ಐತಿಹಾಸಿಕ ಕೋಟೆ ಮತ್ತು ಸ್ಮಾರಕಗಳ ಅಭಿವೃದ್ಧಿಗಾಗಿ ‘ಚಿತ್ರದುರ್ಗ ಕೋಟೆ ಅಭಿವೃದ್ಧಿ ಪ್ರಾಧಿಕಾರ ರಚನೆ’ಗೆ ಒತ್ತು, ಜಿಲ್ಲೆಯಲ್ಲಿರುವ ಕೆರೆಗಳ ಪುನಶ್ಚೇತನ ಮತ್ತು ಜೋಡಣೆಗೆ ಆದ್ಯತೆ, ಪ್ರತಿ ಗ್ರಾಮದಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ.

ಇದು ಜಿಲ್ಲಾ ಬಿಜೆಪಿ ಘಟಕದಿಂದ ಶನಿವಾರ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ನವೀನ್ ಮತ್ತು ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅನ್ವರ್ ಮಾನ್ಪಡಿ ಬಿಡುಗಡೆ ಮಾಡಿದ ಜಿಲ್ಲಾ ಪ್ರಣಾಳಿಕೆಯ ಪ್ರಮುಖ ಅಂಶಗಳು.

ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಧ್ಯಕ್ಷ ನವೀನ್, ‘ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು 15 ಪ್ರಮುಖ ಅಂಶಗಳುಳ್ಳ ಪ್ರಣಾಳಿಕೆ ಸಿದ್ಧ ಪಡಿಸಿದ್ದೇವೆ. ಇದರ ಜತೆಗೆ ತಾಲ್ಲೂಕುವಾರು ಪ್ರಮುಖ ವಿಚಾರಗಳನ್ನು ಆಧರಿಸಿ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಭೂಸ್ವಾದೀನಕ್ಕೆ ತುರ್ತು ಕ್ರಮ, ಅಧಿಕಾರಕ್ಕ ಬಂದ ಆರು ತಿಂಗಳೊಳಗೆ ನನೆಗುದಿಗೆ ಬಿದ್ದಿರುವ ಮೆಡಿಕಲ್ ಕಾಲೇಜು ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಬರಗಾಲ ಪೀಡಿತ ಪ್ರದೇಶವಾದ ಜಿಲ್ಲೆಯಲ್ಲಿ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಆ ಕ್ಷೇತ್ರದ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಪ್ರತ್ಯೇಕ ಕೆಎಂಎಫ್ ಹಾಲು ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಚಿಸಿದ್ದೇವೆ. ಪ್ರತಿ ಎರಡು ತಾಲೂಕಿಗೆ ಒಂದರಂತೆ ಜಿಲ್ಲೆಯಲ್ಲಿ ಮೂರು ಕೋಲ್ಡ್ ಸ್ಟೋರೇಜ್, ತರಕಾರಿ ಮತ್ತು ಹಣ್ಣು ಸಂಸ್ಕರಣಾ ಘಟಕ, ಪ್ರತ್ಯೇಕ ಈರುಳ್ಳಿ ಸಂಸ್ಕರಣಾ ಘಟಕದ ಜತೆಗೆ, ಚಿತ್ರದುರ್ಗದ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ತಂದು ಲಾಜಿಸ್ಟಿಕ್ ಹಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಚಿತ್ರದುರ್ಗದ ಹೊರವಲಯದಲ್ಲಿ ‘ನವನಗರ’ ನಿರ್ಮಾಣ ಮಾಡಿ, ಜಿಲ್ಲೆಯ ಎಲ್ಲ ಸರ್ಕಾರಿ ಇಲಾಖೆಗಳನ್ನು ಒಂದೇ ಆವರಣದಲ್ಲಿ ತರಲಾಗುತ್ತದೆ. ನಗರದಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ, ಜೋಗಿಮಟ್ಟಿ ಗಿರಿಧಾಮಕ್ಕೆ ಪ್ರತ್ಯೇಕ ಪ್ರಾಕಾರ ರಚಿಸಲು ಕ್ರಮ, ರೈತರ ಬೆಳೆಗಳಿಗೆ ಚಿತ್ರದುರ್ಗದಲ್ಲೇ ಮಾರ್ಕೆಟ್ ಲಭಿಸುವಂತೆ ಮಾಡಲು ಮಾರುಕಟ್ಟೆ ಸ್ಥಾಪನೆಗೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಿದ್ದೇವೆ, ಸರ್ಕಾರಿ ಶಾಲೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುತ್ತದೆ' ಎಂದರು.

‘ಚಿತ್ರದುರ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಆಯಾ ತಾಲೂಕುಗಳಲ್ಲಿ ಏನೇನು ಪ್ರಮುಖ ಕೆಲಸಗಳಾಗಬೇಕು ಎಂಬುದರ ಬಗ್ಗೆ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ ಪಟ್ಟಿ ಮಾಡಲಾಗಿದೆ. ಅದರಂತೆ ಮುಂದಿನ ದಿನಗಳಲ್ಲಿ ಕೆಲಸ ನಿರ್ವಹಿಸಲಾಗುತ್ತದೆ’ ಎಂದರು.

ಚುನಾವಣಾ ಜಿಲ್ಲಾ ಉಸ್ತುವಾರಿ ಟಿ.ಜಿ.ನರೇಂದ್ರನಾಥ್ ಮಾತನಾಡಿದರು.

ಬಿಜೆಪಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅನ್ವರ್ ಮಾನ್ಪಡಿ, ಮುಖಂಡರಾದ ಸಿದ್ದೇಶ್‌ಯಾದವ್, ಸುರೇಶ್ ಸಿದ್ದಾಪುರ, ನಾಗರಾಜ್ ಬೇದ್ರೆ, ಶಂಭು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.