ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಬೇಕು ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 10:30 IST
Last Updated 19 ಜನವರಿ 2011, 10:30 IST

ಹೊಳಲ್ಕೆರೆ: ಸರ್ವಶಿಕ್ಷಣ ಅಭಿಯಾನ ಬಂದ ಮೇಲೆ ಸರ್ಕಾರಿ ಶಾಲೆಗಳು ಹೊಸ ಕೊಠಡಿ, ಶೌಚಾಲಯ, ಸಾರ್ವಜನಿಕರ ದೂರು, ಪೀಠೋಪಕರಣ, ಪಾಠೋಪಕರಣ ಮತ್ತಿತರ ಸೌಲಭ್ಯಗಳನ್ನು ಪಡೆದುಕೊಂಡಿವೆ. ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ರೂ ಗಳನ್ನು ಖರ್ಚು ಮಾಡುತ್ತಿದ್ದು, ಶಾಲೆಗಳೆಲ್ಲಾ ಸುಂದರಗೊಳ್ಳುತ್ತಿವೆ. ಇದಕ್ಕೆ ವ್ಯತಿರಿಕ್ತವೆಂಬಂತೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಾತ್ರ ದುರಸ್ತಿ ಕಾಣದೇ ಇನ್ನೂ ಹಳೇ ಗೋದಾಮಿನಂತೆಯೇ ಇದೆ.

ಸುಮಾರು 40ವರ್ಷಗಳ ಹಿಂದೆ ಶಿಕ್ಷಣ ಅಧಿಕಾರಿಯೊಬ್ಬರ ನಿವಾಸಕ್ಕಾಗಿ ಕಟ್ಟಿದ ವಸತಿ ಗೃಹವನ್ನೇ ಬಿಇಒ ಕಚೇರಿ ಮಾಡಿಕೊಳ್ಳಲಾಯಿತು. ಕೇವಲ ಮೂರ್ನಾಲ್ಕು ಕೊಠಡಿಗಳಿರುವ ಕಟ್ಟಡದಲ್ಲೇ ಇಂದಿನವರೆಗೂ ಕಚೇರಿ ನಡೆಯುತ್ತಿದೆ. ಮಳೆ ಬಂದರೆ ನೀರು ಸೋರುವ ಕಚೇರಿಯಲ್ಲಿ ಕೆಲಸ ಮಾಡುವುದೇ ಇಲ್ಲಿನ ನೌಕರರಿಗೆ ದೊಡ್ಡ ಸವಾಲು.ಕಚೇರಿಯ ಕಿಟಕಿ, ಬಾಗಿಲುಗಳು ಹಳೆಯದಾಗಿದ್ದು, ಕಳ್ಳಕಾಕರಿಂದ ದಾಖಲೆಗಳನ್ನು ರಕ್ಷಿಸುವುದೂ ಒಂದು ಸವಾಲಿನ ಕೆಲಸ. ದಶಕಗಳಿಂದ ಸುಣ್ಣ, ಬಣ್ಣ, ದುರಸ್ತಿ ಕಾಣದ ಕಟ್ಟಡ ಪಾಳುಬಿದ್ದ ಮನೆಯೊಂದನ್ನು ನೆನಪಿಸುವಂತಿದೆ.

ಬಿಇಒ, ಅಧೀಕ್ಷಕ, ವ್ಯವಸ್ಥಾಪಕ, ಗುಮಾಸ್ತರು ಸೇರಿದಂತೆ 17 ಸಿಬ್ಬಂದಿ ಇದೇ ಕಿರಿದಾದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಕ್ಕಟ್ಟಾದ ಕೊಠಡಿಗಳಲ್ಲಿ ದಾಖಲೆಗಳು, ಕುರ್ಚಿ, ಮೇಜುಗಳನ್ನು ಇಡಲೂ ಜಾಗವಿಲ್ಲ. ತಾಲ್ಲೂಕಿನಲ್ಲಿ ಸುಮಾರು 1,300 ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿದ್ದು, ಕಚೇರಿ ಕೆಲಸಕ್ಕೆಂದು ಬಂದರೆ ಇಲ್ಲಿ ನಿಲ್ಲಲೂ ಒಂದಿಷ್ಟು ಜಾಗವಿಲ್ಲ. ಕಚೇರಿಯಲ್ಲಿ ಕುಡಿಯುವ ನೀರು, ಸುಸಜ್ಜಿತ ಶೌಚಾಲಯಗಳಿಲ್ಲದೇ ನೌಕರರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಪಟ್ಟಣದ ಮುಖ್ಯವೃತ್ತಕ್ಕೆ ಅಂಟಿಕೊಂಡೇ ಕಚೇರಿ ಇರುವುದರಿಂದ ಸದಾ ಸಾರ್ವಜನಿಕರು ಮತ್ತು ವಾಹನಗಳ ಗದ್ದಲ ಕಿರಿಕಿರಿ ಉಂಟುಮಾಡುತ್ತದೆ.  

ಕಚೇರಿ ಆವರಣವೇ ಸಾರ್ವಜನಿಕ ಶೌಚಾಲಯ: ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ-13ಕ್ಕೆ ಹೊಂದಿಕೊಂಡೇ ಕಚೇರಿ ಇರುವುದರಿಂದ, ಸಾರ್ವಜನಿಕ ಸಂಚಾರ ಹೆಚ್ಚಾಗಿದೆ. ಕಚೇರಿ ಮುಂದೆ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಮಲ, ಮೂತ್ರ ವಿಸರ್ಜಿಸಲು ಇದೇ ಬಯಲು ಶೌಚಾಲಯ. ಹಗಲಿನಲ್ಲಿ ನಿರ್ಭಯವಾಗಿ ಮೂತ್ರ ವಿಸರ್ಜನೆ ಮಾಡುವ ಸಾರ್ವಜನಿಕರು, ರಾತ್ರಿಯಾದಂತೆ, ಮಲವಿಸರ್ಜನೆ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಕಚೇರಿಯ ಸಿಬ್ಬಂದಿ ಸದಾ ದುರ್ವಾಸನೆಯಲ್ಲೇ ಕೆಲಸ ಮಾಡುವ ಅನಿವಾರ್ಯತೆ ಇದೆ. ಶಿಕ್ಷಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಇದ್ದು, ಯಾರೂ ಸಮಸ್ಯೆ ಪರಿಹರಿಸುವತ್ತ ಚಿಂತಿಸಿಲ್ಲ.

ಪಟ್ಟಣ ಪಂಚಾಯ್ತಿ ಅನಗತ್ಯ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯಗಳಿಲ್ಲ. ಈ ಸ್ಥಳ ಪಟ್ಟಣದ ಕೇಂದ್ರ ಭಾಗವಾಗಿದ್ದು, ಜನಸಂಚಾರ ಹೆಚ್ಚಾಗಿರುತ್ತದೆ. ಹತ್ತಿರದಲ್ಲಿ ಒಂದೂ ಶೌಚಾಲಯ ಇಲ್ಲದೆ ಜನ ಎಲ್ಲೆಂದರಲ್ಲಿ ಹೊಲಸು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.ಕ್ಷೇತ್ರ ಶಿಕ್ಷಣಾಧಿಕಾರಿ  ಕಚೇರಿ ಎಲ್ಲಾ ಶಾಲೆಗಳಿಗೆ ಮಾದರಿಯಾಗಿರಬೇಕು. ಈಗಿನ ಕಚೇರಿ ಶಿಥಿಲಗೊಂಡಿರುವುದಲ್ಲದೆ, ಕಿರಿದಾಗಿದೆ. ಅತ್ಯಂತ ಜನಸಂದಣಿಯಿಂದ ಕೂಡಿದ್ದು, ಸುಸಜ್ಜಿತ ಕಟ್ಟಡ ನಿರ್ಮಿಸಬೇಕು ಎಂಬುದು ಎಲ್ಲ ಶಿಕ್ಷಕರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.