ADVERTISEMENT

ಖಾಸಗಿಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

ಎಲ್‌ಕೆಜಿ, ಯುಕೆಜಿ ಆರಂಭ: ಎರಡೇ ದಿನದಲ್ಲಿ 79 ಮಕ್ಕಳ ದಾಖಲಾತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 12:08 IST
Last Updated 1 ಜೂನ್ 2017, 12:08 IST
ಖಾಸಗಿಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ
ಖಾಸಗಿಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ   

ಹೊಳಲ್ಕೆರೆ: ‘ಖಾಸಗಿ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆ ಆಗಿದೆ’ ಎಂಬ ಅಪವಾದ ಈ ಶಾಲೆಗೆ ಅನ್ವಯ ಆಗುವುದಿಲ್ಲ. ಏಕೆಂದರೆ ಶಾಲೆ ಆರಂಭವಾದ ಎರಡೇ ದಿನದಲ್ಲಿ 79 ಮಕ್ಕಳು ದಾಖಲಾಗಿದ್ದಾರೆ.

ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದು, ಈಗಾಗಲೇ 26 ಮಕ್ಕಳು ಸೇರಿದ್ದಾರೆ. 1, 5, 6 ಮತ್ತು 7ನೇ ತರಗತಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಆರಂಭಿಸಿದ್ದು, ಈ ತರಗತಿಗಳಿಗೂ ಒಟ್ಟು 53 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಕಳೆದ ವರ್ಷ 105 ವಿದ್ಯಾರ್ಥಿಗಳಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 184ಕ್ಕೆ ಏರಿದೆ. ಈ ವರ್ಷ 8ನೇ ತರಗತಿ ಆರಂಭವಾಗಲಿದ್ದು, ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಪೋಷಕರೇ ವಾಹನ ವ್ಯವಸ್ಥೆ ಮಾಡಿದ್ದಾರೆ.

ಇದೇ ಕಟ್ಟಡದಲ್ಲಿರುವ ಉರ್ದು ಶಾಲೆಯಲ್ಲೂ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕಳೆದ ವರ್ಷ 68 ವಿದ್ಯಾರ್ಥಿಗಳಿದ್ದ ಈ ಶಾಲೆಯಲ್ಲಿ ಈಗ  ‘ಮಕ್ಕಳ ಮನೆ’ ಸೇರಿ 103 ವಿದ್ಯಾರ್ಥಿಗಳಿದ್ದಾರೆ.

ಡಿಡಿಪಿಐ ರೇವಣಸಿದ್ದಪ್ಪ ಶಾಲೆಗೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು. ‘ಶಾಲಾ ಕಟ್ಟಡ ಹೈಟೆಕ್ ಆಗಿರುವಂತೆ ಕೊಡುವ ಶಿಕ್ಷಣವೂ ಗುಣಮಟ್ಟದಿಂದ  ಕೂಡಿರಬೇಕು. ಉತ್ತಮ ಶಿಕ್ಷಣ ನೀಡಿದರೆ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡುತ್ತಾರೆ’ ಎಂದರು.

‘ಸರ್ಕಾರ ಶಾಲೆಗೆ ಎಲ್ಲಾ ಮೂಲ ಸೌಕರ್ಯ ಒದಗಿಸಿದೆ. ಕೋಟ್ಯಂತರ ರೂ ಖರ್ಚು ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಶಿಕ್ಷಕರು ಶ್ರಮ ವಹಿಸಿದರೆ ಶಾಲೆ ಇನ್ನೂ ಅಭಿವೃದ್ಧಿ ಹೊಂದುತ್ತದೆ’ ಎಂದು ಬಿಇಒ ಡಿ.ಎ.ತಿಮ್ಮಣ್ಣ ತಿಳಿಸಿದರು. 

ಗೌರವ ಶಿಕ್ಷಕರ ನೇಮಕ: ಶಾಲೆಯಲ್ಲಿ ಆರು ಶಿಕ್ಷಕರಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲು ಮೂವರು ಗೌರವ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕರನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ನೇಮಕ ಮಾಡಿ ಕೊಳ್ಳಲಾಗಿದೆ. ಶಿಕ್ಷಕರಿಗೆ ಗೌರವ ಸಂಭಾವನೆ ಕೊಡಲು ತೀರ್ಮಾನಿಸಲಾಗಿದೆ.

ADVERTISEMENT

ಸಚಿವ ಎಚ್.ಆಂಜನೇಯ ಸುಮಾರು ₹ 7 ಕೋಟಿ ವೆಚ್ಚದಲ್ಲಿ ಹೈಟೆಕ್ ಕಟ್ಟಡ ನಿರ್ಮಿಸಿದ್ದು, ಅತ್ಯಾಧುನಿಕ ಸೌಲಭ್ಯ ಒದಗಿಸಿದ್ದಾರೆ. ಕಳೆದ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡ ಉದ್ಘಾಟಿಸಿದ್ದರು.

ದಾಖಲಾತಿ ಆಂದೋಲನ: ಮುಖ್ಯಶಿಕ್ಷಕಿ ಯಶೋದಮ್ಮ, ಸಹ ಶಿಕ್ಷಕರಾದ ಜಯಲಕ್ಷ್ಮೀ, ಜೆ.ಮಂಜುಳಾ, ನೇತ್ರಾವತಿ, ಬಿ.ಮಂಜುಳಾ, ನಿರಂಜನ ಮೂರ್ತಿ ಕಳೆದ ಒಂದು ತಿಂಗಳಿನಿಂದ ಮಕ್ಕಳ ದಾಖಲಾತಿಗೆ ಶ್ರಮಿಸಿದ್ದಾರೆ. ಅಮಟೆ, ಹುಣಸೆಪಂಚೆ, ಸಿಹಿನೀರ ಕಟ್ಟೆ, ಹಳೇಹಳ್ಳಿ, ಕಣಿವೆ, ಕುಡಿನೀರ ಕಟ್ಟೆ, ಲಂಬಾಣಿ ಹಟ್ಟಿ, ಚೀರನ ಹಳ್ಳಿ ಮತ್ತಿತರ ಗ್ರಾಮಗಳಿಗೆ ಆಟೊದಲ್ಲಿ ತೆರಳಿ ಮೈಕ್ ಮೂಲಕ ಪ್ರಚಾರ ನಡೆಸಿದ್ದಾರೆ.

ಶಾಲೆಯ ಮುಂದೆ ದೊಡ್ಡ ಫ್ಲೆಕ್ಸ್ ಹಾಕಿ ಗಮನ ಸೆಳೆದಿದ್ದಾರೆ. ಖಾಸಗಿ ಶಾಲೆಗಳಂತೆ ಶಾಲಾ ಕಟ್ಟಡ, ಮೂಲ ಸೌಕರ್ಯಗಳ ಬಗ್ಗೆ ಬಣ್ಣದ ಕರಪತ್ರ ಮುದ್ರಿಸಿ
ವಿತರಿಸಿದ್ದಾರೆ. ಸುಮಾರು ₹ 12,000 ಖರ್ಚು ಮಾಡಿ ‘ನಲಿ ಕಲಿ’ ಕೊಠಡಿ ಅಲಂಕರಿಸಲಾಗಿದೆ. ಇದರಿಂದ ಪ್ರೇರಣೆಯಾದ ಖಾಸಗಿ ಶಾಲೆಗಳ ಸುಮಾರು 30 ಮಕ್ಕಳು ಈ ಶಾಲೆಗೆ ಸೇರ್ಪಡೆ ಆಗಿದ್ದಾರೆ.

ವಿದ್ಯಾರ್ಥಿಗಳಿಗೆ ಬಂಪರ್್ ಆಫರ್: ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳಿಗೆ ‘ಬಂಪರ್್ ಆಫರ್್’ ನೀಡಲಾಗಿದೆ. ಸರ್ಕಾರ ಕೊಡುವ ಪ್ರೋತ್ಸಾಹದಾಯಕ ಯೋಜನೆಗಳ ಜತೆಗೆ ಪ್ರತ್ಯೇಕ ಸಮವಸ್ತ್ರ, ಆರು–ಏಳನೇ ತರಗತಿಯ ವಿದ್ಯಾರ್ಥಿನಿಯರಿಗೆ ಚೂಡಿದಾರ್್, ಟೈ, ಬೆಲ್ಟ್, ಐಡಿ ಕಾರ್ಡ್, ನೋಟ್ ಬುಕ್, ಲೇಖನ ಸಾಮಗ್ರಿ ಕೊಡುವುದಾಗಿ ಭರವಸೆ ನೀಡಲಾಗಿದೆ.

ಉರ್ದು ಶಾಲೆಯಲ್ಲೂ ದಾಖಲಾತಿ ಹೆಚ್ಚಳ: ಉರ್ದು ಶಾಲೆಯಲ್ಲೂ ದಾಖಲಾತಿ ಹೆಚ್ಚಾಗಿದೆ. ಮುಖ್ಯ ಶಿಕ್ಷಕ ಹಾರುನ್ ರಶೀದ್, ಸಹ ಶಿಕ್ಷಕರಾದ ಫಿರ್ದೋಸ್ ಅಖ್ತರ್, ಶಕೀಲಾ ಜಾನ್, ಮುನೀರಾ, ಷಹನಾಜ್ ಬೇಗಂ, ಜೀನತ್ ಉನ್ನೀಸಾ ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ 35 ಮಕ್ಕಳನ್ನು ಶಾಲೆಗೆ ಕರೆತಂದಿದ್ದಾರೆ. ಇಲ್ಲಿಯೂ 6 ಮತ್ತು 7ನೇ ತರಗತಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.