ADVERTISEMENT

ಖಿನ್ನತೆಗೆ ತಜ್ಞರಿಂದ ಚಿಕಿತ್ಸೆ ಪಡೆಯಿರಿ’

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 6:22 IST
Last Updated 13 ಅಕ್ಟೋಬರ್ 2017, 6:22 IST

ಚಳ್ಳಕೆರೆ: ಮಾನಸಿಕ ಖಿನ್ನತೆಗೆ ಒಳಗಾದವರಿಗೆ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕೇ ಹೊರತು ಮೌಢ್ಯಗಳನ್ನು ಪಾಲಿಸಬಾರದು ಎಂದು ಹಿರಿಯ ಸಿವಿಲ್ ನಾಯಾಧೀಶ ದೇವೆಂದ್ರ ಪಂಡಿತ್ ಸಲಹೆ ನೀಡಿದರು.

ನಗರದ ರೋಟರಿ ಬಾಲ ಭವನದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಹಾಗೂ ಆರೋಗ್ಯ ಇಲಾಖೆ ಆಯೋಜಿಸಿದ್ದ ‘ಮಾನಸಿಕ ಅಸ್ವಸ್ತತೆ ಮತ್ತು ಆರೋಗ್ಯ ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚೆಗೆ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಲವು ಒತ್ತಡಗಳಿಂದ ಇಂಥ ಸಮಸ್ಯೆಗಳು ಹೆಚ್ಚಿವೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ
ನಿಗದಿತ ಸಮಯಕ್ಕೆ ಕೆಲಸ ಮುಗಿಸುವ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಅವರು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು.

ADVERTISEMENT

ನಿತ್ಯವೂ ಧ್ಯಾನ ಮಾಡಬಹುದು. ಇದರಿಂದ ಮನಸ್ಸಿಗೆ ನೆಮ್ಮದಿ ಶಾಂತಿ ದೊರೆಯುತ್ತಿದೆ. ಇದರಿಂದ ಮಾನಸಿಕ ಸಮತೊಲನ ಉಂಟಾಗುತ್ತದೆ. ಜೀವನದಲ್ಲಿ ನೆಮ್ಮದಿ ಕಾಣಬಹುದು ಎಂದರು.

ನ್ಯಾಯಾಧೀಶ ಸುಶಾಂತ್‌ ಚೌಗಲೆ ಮಾತನಾಡಿ, ‘ರಸ್ತೆ ಬದಿಯಲ್ಲಿ ಮಾನಸಿಕ ಅಸ್ವಸ್ತರಿದ್ದರೆ ಪೊಲೀಸ್ ಇಲಾಖೆಯ ಗಮನ ತರಬೇಕು. ಅವರು ಇಂಥ ವ್ಯಕ್ತಿಗಳನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತದೆ’ ಎಂದು ತಿಳಿಸಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ, ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ಅಶ್ವತ್ಥನಾಯಕ, ಮನೋರೋಗ ತಜ್ಞ ಡಾ.ಸಿ.ಎಂ.ಗೋಪಾಲ್‌ದಾಸ್ ಮಾತನಾಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಸುಧಾ, ಗಿರಿಜಾಂಬಾ, ಸರ್ಕಾರಿ ಅಭಿಯೋಜಕ ಲಿಂಗೇಶ್ವರ, ವಕೀಲರ ಸಂಘದ ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ
ಎನ್.ತಿಪ್ಪೇಸ್ವಾಮಿ, ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.