ADVERTISEMENT

ಗಣಪತಿ ದೇಗುಲ ದಿಢೀರ್ ಉದ್ಭವ!

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 9:09 IST
Last Updated 7 ಜೂನ್ 2013, 9:09 IST

ಹಿರಿಯೂರು: ಯಾವುದೋ ಪೂಜೆ ಮಾಡುತ್ತೇವೆ ಎಂದು ತಿಳಿಸಿ, ಪೂಜೆಯ ನಂತರ ರಾತ್ರೋರಾತ್ರಿ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುವ ಜಾಗದಲ್ಲಿ ಗಣಪತಿ ದೇಗುಲ ನಿರ್ಮಿಸಲಾಗಿದೆ ಎಂದು ನಗರದ ಕುವೆಂಪು ಬಡಾವಣೆಯ ನಿವಾಸಿಗಳು ದೇಗುಲ ನಿರ್ಮಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬುಧವಾರ ಸ್ಥಳದಲ್ಲಿ ಪೊಲೀಸ್ ಕಾವಲು ಹಾಕಲಾಗಿದೆ.

ರಿ.ಸ.ನಂ. 258 ರಲ್ಲಿನ 3.17 ಎಕರೆ ಭೂಮಿಯನ್ನು ವಸತಿಗಾಗಿ ಪರಿವರ್ತಿಸುವ ಸಂದರ್ಭದಲ್ಲಿ ಪಶ್ಚಿಮದ ಕೊನೆಯಲ್ಲಿ ಉದ್ಯಾನ ನಿರ್ಮಾಣಕ್ಕೆಂದು ಪೂರ್ವ-ಪಶ್ಚಿಮ 36 ಮೀಟರ್, ಉತ್ತರ-ದಕ್ಷಿಣ 56 ಮೀಟರ್ ಜಾಗವನ್ನು ಮೀಸಲಿಡಲಾಗಿದೆ. ಸದರಿ ಜಾಗದಲ್ಲಿ ಈಗಾಗಲೇ ಅಂಗನವಾಡಿ ಕೇಂದ್ರ ನಿರ್ಮಿಸಲಾಗಿದೆ.

ಈಗ ಇದ್ದಕ್ಕಿದ್ದಂತೆ ಈ ಬಡಾವಣೆ ನಿವಾಸಿಗಳಲ್ಲದವರು ಅನಧಿಕೃತವಾಗಿ ದೇಗುಲ ನಿರ್ಮಾಣಕ್ಕೆ ಮುಂದಾಗಿದ್ದು, ಇಲ್ಲಿ ದೇಗುಲದ ಬದಲು ಉದ್ಯಾನವನ್ನೇ ನಿರ್ಮಿಸಬೇಕು ಎಂದು ಕುವೆಂಪು ನಗರ ಕ್ಷೇಮಾಭಿವೃದ್ಧಿ ಸೇವಾ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಒಂದೆರಡು ದಿನದಲ್ಲಿ ದೇಗುಲ ತೆರವುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು  ಪೊಲೀಸ್ ಕಾವಲು ಹಾಕಲಾಗಿದೆ ಎಂದು ಸಂಘದ ಮಂಜುನಾಥ್ ತಿಳಿಸಿದ್ದಾರೆ.

9ಕ್ಕೆ ಅಭಿನಂದನಾ ಸಮಾರಂಭ
ನಾಯಕನಹಟ್ಟಿ: ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಸಮಿತಿ ವತಿಯಿಂದ ಜೂನ್ 9 ರಂದು ಬೆಳಿಗ್ಗೆ 11ಕ್ಕೆ ಗ್ರಾಮದ ಹೊರಮಠದ ಸಮುದಾಯ ಭವನದಲ್ಲಿ ಜಿಲ್ಲೆಯ ನೂತನ  ಸಚಿವರು, ಶಾಸಕರುಗಳಿಗೆ  ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಉಜ್ಜಯಿನಿ ಪೀಠದ ಶ್ರೀಗಳು ಸಮಾರಂಭದ ಸಾನ್ನಿಧ್ಯ ವಹಿಸುವರು. ಶಾಸಕ ಎಸ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು.
ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎಂ.ವೈ.ಟಿ. ಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.