ADVERTISEMENT

ಗಾಯತ್ರಿ ಜಲಾಶಯ ತುಂಬಿಸಲು ಪ್ರಯತ್ನ

ಶಾಸಕ ಡಿ.ಸುಧಾಕರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 10:50 IST
Last Updated 3 ಮಾರ್ಚ್ 2014, 10:50 IST

ಹಿರಿಯೂರು:  ಹಲವು ವರ್ಷಗಳಿಂದ ಈ ಭಾಗದ ಜನರ ಬೇಡಿಕೆಯಾಗಿದ್ದ ಜವನಗೊಂಡನಹಳ್ಳಿ-ಜೂಲಯ್ಯನ ಹಟ್ಟಿ-ಹುರುಳಿ ದಿಬ್ದಾರಹಟ್ಟಿ- ಓಬಳಾಪುರ-ಕಿಲ್ಲಾರದಹಳ್ಳಿ- ಮಾವಿನಮಡು-ಪಿಲ್ಲಾಲಿ ಗ್ರಾಮಗಳ ೧೦.೫೬ ಕಿ.ಮೀ. ವಿಸ್ತೀರ್ಣದ ರಸ್ತೆಯನ್ನು ೯ ತಿಂಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಶಾಸಕ ಡಿ.ಸುಧಾಕರ್ ಹೇಳಿದರು.

ತಾಲ್ಲೂಕಿನ ಜವನಗೊಂಡನಹಳ್ಳಿಯಲ್ಲಿ ಭಾನುವಾರ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆ ಯಡಿ ₨ 5 ಕೋಟಿ ೫೬ ಲಕ್ಷ ವೆಚ್ಚದಲ್ಲಿ  ೧೦.೫೬ ಕಿ.ಮೀ. ದೂರದ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಗುತ್ತಿಗೆದಾರರು ಸದರಿ ರಸ್ತೆಯನ್ನು ಐದು ವರ್ಷ ನಿರ್ವಹಣೆ ಮಾಡುವುದಲ್ಲದೆ ೬ನೇ ವರ್ಷ ಪುನಃ ಡಾಂಬರೀಕರಣ ಮಾಡಿ ಸರ್ಕಾರಕ್ಕೆ ಒಪ್ಪಿಸಬೇಕು. ಚುನಾವಣೆಗೆ ಮುಂಚೆ ನೀಡಿದ್ದ ಭರವಸೆಯಂತೆ ಜವನಗೊಂಡನಹಳ್ಳಿ ಹೋಬಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದೇನೆ. ಈ ಭಾಗದಲ್ಲಿ ಪರಿಶಿಷ್ಟ ಜಾತಿ-ವರ್ಗದವರು, ಹಿಂದುಳಿದವರು ಹೆಚ್ಚಿದ್ದು, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎನ್ನುವುದು ನನ್ನ ಹಂಬಲ ಎಂದು ಅವರು ತಿಳಿಸಿದರು.

ಹೋಬಳಿಯ ೩೮ ಹಳ್ಳಿಗಳಿಗೆ ₨ ೨೮ ಕೋಟಿ, ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಗಾಯತ್ರಿ ಜಲಾಶಯಕ್ಕೆ ಯಾವುದಾದರೂ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸುಧಾಕರ್ ಭರವಸೆ ನೀಡಿದರು.

ಜಿ.ಪಂ.ಸದಸ್ಯೆ ಕರಿಯಮ್ಮ ಕೃಷಿ ಮಾರುಕಟ್ಟೆ ಸಮಿತಿ ನಿರ್ದೇಶಕ ಎಂ.ಆರ್.ಈರಣ್ಣ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಬಿ.ವಿ.ಮಾಧವ ಮಾತನಾಡಿದರು.

ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ರಂಗನಾಥ್, ಲಕ್ಷ್ಮೀದೇವಿ, ಟಿ.ಕೃಷ್ಣಪ್ಪ, ಕಂದಿಕೆರೆ ಸುರೇಶ್ ಬಾಬು, ಈರಲಿಂಗೇಗೌಡ, ರಾಧಮ್ಮ, ಪಾತಲಿಂಗಪ್ಪ, ಮಂಜುನಾಥ್, ಮುಕುಂದ, ತಿಮ್ಮರಾಯಪ್ಪ, ನಜೀರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.