ADVERTISEMENT

ಗುಂಡ್ಲೂರಿನ ಬಂಡೆ ಮೇಲೆ ಪ್ರಾಚೀನ ಚಿತ್ರ

ಮೊಳಕಾಲ್ಮುರು: ಇತಿಹಾಸ ಪ್ರಿಯರಲ್ಲಿ ತೀವ್ರ ಕುತೂಹಲ, ಹೆಚ್ಚಿನ ಸಂಶೋಧನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 9:28 IST
Last Updated 21 ಜನವರಿ 2016, 9:28 IST
ಮೊಳಕಾಲ್ಮುರು ಸಮೀಪದ ಗುಂಡ್ಲೂರು ಆಂಜನೇಯ ಸ್ವಾಮಿ ದೇಗುಲದ ಬಳಿ ಬಂಡೆ ಮೇಲಿರುವ ಪ್ರಾಚೀನ ಕಲಾಕೃತಿ (ಎಡಚಿತ್ರ). ಪಾಳುಬಿದ್ದ ಮನೆಗಳ ಅವಶೇಷ.
ಮೊಳಕಾಲ್ಮುರು ಸಮೀಪದ ಗುಂಡ್ಲೂರು ಆಂಜನೇಯ ಸ್ವಾಮಿ ದೇಗುಲದ ಬಳಿ ಬಂಡೆ ಮೇಲಿರುವ ಪ್ರಾಚೀನ ಕಲಾಕೃತಿ (ಎಡಚಿತ್ರ). ಪಾಳುಬಿದ್ದ ಮನೆಗಳ ಅವಶೇಷ.   

ಮೊಳಕಾಲ್ಮುರು:  ಪಾಳುಬಿದ್ದಿರುವ ಹತ್ತಾರು ಮನೆಗಳು, ಅಲ್ಲಲ್ಲಿ ಕಾಣಸಿಗುವ ಪ್ರಾಕೃತಿಕ ಒಳಕಲ್ಲುಗಳು, ನಿಧಿಗಳ್ಳರ ಹಾವಳಿಯಿಂದ ಆಳ ಗುಂಡಿಗಳು, ಮೂಲೆಗುಂಪಾದ ನಾಗರಕಲ್ಲು, ಒಡೆದು ಹೋದ ಕೋಟೆ, ಪುರಾತನ ಆಂಜನೇಯ ಸ್ವಾಮಿ ದೇವಸ್ಥಾನ...!

– ಇಂತಹ ಸ್ಥಳ ಇರುವುದು ಪಟ್ಟಣ ಸಮೀಪದ ಗುಂಡ್ಲೂರು ಬಳಿ. ಮರ್ಲಹಳ್ಳಿ ಯಿಂದ ಎರಡು ಕಿ.ಮೀ ದೂರ ಸಾಗಿದರೆ ಸಿಗುವ ಹಳೆ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಈ ಕುರುಹುಗಳಿವೆ. ಇಲ್ಲಿ ಶತಮಾನಗಳ ಹಿಂದೆಯೇ ಇಲ್ಲಿ ಜನರು ವಾಸವಿದ್ದರು ಎಂಬುದಕ್ಕೆ ಸಾಕ್ಷಿ ಎನ್ನಲಾಗಿದೆ.

ಪುರಾತನ ಕಲಾಕೃತಿಗಳು
ಈ ಸ್ಥಳದಲ್ಲಿ ಪ್ರಾಚೀನವಾದ ಎರಡು ಕಲಾಕೃತಿಗಳು ಪತ್ತೆಯಾಗಿವೆ. ಆಂಜನೇಯ ದೇವಸ್ಥಾನ ಮುಂಭಾಗದ ಬಂಡೆಯ ಮೇಲೆ ಚಿತ್ರಗಳು
ಕಂಡು ಬಂದಿವೆ. ದೇವಸ್ಥಾನದ ಮುಂಭಾಗದಲ್ಲಿ ಇರುವ ರೇಖಾಚಿತ್ರವು ರಚನೆಯ ಸಿದ್ಧತೆಯಂತಿದೆ. ಮತ್ತೊಂದು ಪಶ್ಚಿಮ ದಿಕ್ಕಿನ ಬಂಡೆಯ ಹಿಂಬದಿಯಲ್ಲಿದೆ.

‘ಈವರೆಗೂ ಇದರ ಬಗ್ಗೆ ಸಾರ್ವಜನಿಕ ವರದಿಯಾಗಿಲ್ಲ. ಸ್ಥಳ ಇತಿಹಾಸ ಸಂಶೋಧನೆಗೆ ಪೂರಕ ವಾಗಿದ್ದು, ಬೆಳಕು ಚೆಲ್ಲುವ ಕಾರ್ಯಕ್ಕೆ ಸಂಬಂಧಪಟ್ಟರು ಮುಂದಾಗಬೇಕು. ಇಲ್ಲಿ 200ಕ್ಕೂ ಹೆಚ್ಚು ಪಾಳುಬಿದ್ದ ಮನೆ ಗಳ ಕುರುಹು ಕಾಣಬಹುದು’ ಎಂದು ಭಾನುವಾರ ಸ್ಥಳದಲ್ಲಿ ಹಾಜರಿದ್ದ
ಶಿಕ್ಷಕ ಶಾಂತವೀರಣ್ಣ, ಹೋಟೆಲ್‌ ಮಾಲೀಕ ಕೊಟ್ರೇಶ್‌, ಸರ್ಎಂವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘300ಕ್ಕೂ ಹೆಚ್ಚು ವರ್ಷಗಳ ಹಿಂದೆ ಇಲ್ಲಿ ಜನವಸತಿ ಇತ್ತಂತೆ, ಗುಂಡ್ಲೂರು (ಗುಂಡುಗಳ ಮಧ್ಯೆಯ ಊರು ಎಂದಿರ ಬಹುದು) ಇಲ್ಲಿಂದ ಬೇಸಾಯಕ್ಕೆ ನಿತ್ಯ 100 ಕುಂಟೆ, 100 ಕೂರಿಗೆ ಹೊರಡುತ್ತಿ ದ್ದವು ಎಂದು ಕೇಳಿದ್ದೇವೆ’ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

‘ಇದನ್ನು ಗಮನಿಸಿದಲ್ಲಿ ದೊಡ್ಡ ಊರು ಇದಾಗಿರಬಹುದು ಕಾಡು ಪ್ರಾಣಿ ಗಳ ಹಾವಳಿ ಅಥವಾ ಮಾರಕ ಸಾಂಕ್ರಾಮಿಕ ರೋಗದಿಂದಾಗಿ ಇಲ್ಲಿಂದ ಜನರು ಈಗಿನ ಹೊಸ ಗುಂಡ್ಲೂರು, ದಾಸರಹಟ್ಟಿಗೆ ವಲಸೆ ಹೋದರು ಎಂದು ಎನ್ನಲಾಗಿದೆ’ ಎಂಬುದು ಗ್ರಾಮಸ್ಥ ಕೊಟ್ರೇಶ್‌್ ಅವರ ಅಭಿಪ್ರಾಯ.

ಶತಮಾನಗಳ ಮೊದಲೇ ಇಲ್ಲಿ ಜನ ವಸತಿಯಿದ್ದ ಬಗ್ಗೆ ಕುರುಹುಗಳು  ಪತ್ತೆಯಾಗಿರುವುದನ್ನು ಈ ಸಂದರ್ಭ ದಲ್ಲಿ ಸ್ಮರಿಸಬಹುದು. ಈ ಸ್ಥಳದ ಬಗ್ಗೆ ಹೆಚ್ಚಿನ ಸಂಶೋಧನೆ ಯಾಗಿ, ಇತಿಹಾಸದ ಪುಟಗಳತ್ತ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ ಎಂಬುದು ಸ್ಥಳೀಯ ನಿವಾಸಿಗಳ ಕೋರಿಕೆಯಾಗಿದೆ.

1,200 ವರ್ಷಗಳ ಹಿಂದಿನದು..?
ಚಿತ್ರ ವೀಕ್ಷಿಸಿ ಮಾಹಿತಿ ನೀಡಿದ ಹಿರಿಯ ಜಾನಪದ ತಜ್ಞ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ‘ಕಲಾಕೃತಿಯಲ್ಲಿ ಇಬ್ಬರು ಮಹಿಳೆಯರು ಒಂದು ಕೈಯಲ್ಲಿ ಗುರಾಣಿ ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ದೊಡ್ಡ ಕಾಡುಹಂದಿ ಬೇಟೆಯಾಡುವ ಅಥವಾ ರಕ್ಷಣೆ ಪಡೆಯುವುದನ್ನು ಬಗ್ಗೆ ವಿವರಿಸುವಂತಿದೆ.

ಬಳಸಿರುವ ಆಯುಧಗಳನ್ನು ಗಮನಿಸಿದರೆ, ಇದು ಸುಮಾರು 1,200 ವರ್ಷಗಳಷ್ಟು ಹಿಂದಿನದ್ದಾಗಿರುವ ಸಾಧ್ಯತೆಯಿದೆ’ ಎಂದು ತಿಳಿಸಿದರು. ಇತಿಹಾಸ ತಜ್ಞ ಡಾ.ರಾಜಶೇಖರಪ್ಪ ಸಹ ಇದೇ ಅಭಿಮತ ವ್ಯಕ್ತಪಡಿಸಿದ್ದಾರೆ. ಕಲಾಕೃತಿಗೆ ಗಿಡಮೂಲಿಕೆಗಳ ವರ್ಣ ಬಳಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.