ಚಿತ್ರದುರ್ಗ: ಇತ್ತೀಚೆಗೆ ಸರ್ಕಾರ ಜಾರಿ ಮಾಡಿರುವ ಗುಟ್ಕಾ ನಿಷೇಧ ಕಾಯ್ದೆ ಉಲ್ಲಂಘಿಸಿದವರಿಗೆ ರೂ 10 ಲಕ್ಷ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ `ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕಾಯ್ದೆ ಸಲಹಾ ಸಮಿತಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಸಮಿತಿ' ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಜ್ಲ್ಲಿಲೆಯಾದ್ಯಂತ ಗುಟ್ಕಾ, ತಂಬಾಕು ಸಹಿತ ಪಾನ್‌ಮಸಾಲ ಪದಾರ್ಥಗಳ ತಯಾರಿಕೆ, ಸಂಗ್ರಹಣೆ ಹಾಗೂ ಮಾರಾಟ ಮಾಡಿದರೆ ಅಂಥವರಿಗೆ ದಂಡ ವಿಧಿಸುವ ಜತೆಗೆ ಜೈಲು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದರು.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗುಟ್ಕಾ ಮತ್ತು ತಂಬಾಕುಯುಕ್ತ ಪಾನ್‌ಮಸಾಲ ಪದಾರ್ಥಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ವಿತರಣೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (ನಿಷೇಧ ಮತ್ತು ನಿರ್ಬಂಧ) ನಿಬಂಧನೆ 2011ರ ಅನ್ವಯ ರಾಜ್ಯದಲ್ಲಿ 2013 ಮೇ 30ರಿಂದ ಜಾರಿಗೆ ಬರುವಂತೆ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರರ ನೇತೃತ್ವದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು, ಪೊಲೀಸ್ ಹಾಗೂ ಪುರಸಭಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಗುಟ್ಕಾ ಮತ್ತು ತಂಬಾಕುಸಹಿತ ಪಾನ್‌ಮಸಾಲಗಳನ್ನು ದಾಸ್ತಾನು ಮಾಡುವವರು ಮತ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಭೆಯಲ್ಲಿ ಸೂಚಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿದೆ.
ಧೂಮಪಾನ ಮಾಡಿದಲ್ಲಿ ರೂ 200ವರೆಗೆ ದಂಡ ವಿಧಿಸಲಾಗುವುದು. ಶಾಲಾ ಕಾಲೇಜುಗಳ ಸುತ್ತ ನೂರು ಅಡಿ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಷೇಧಿಸಿದೆ. 18 ವರ್ಷದೊಳಗಿನ ವ್ಯಕ್ತಿಗಳು ತಂಬಾಕು ಸಹಿತ ಪದಾರ್ಥಗಳ ಮಾರಾಟ ಮಾಡುವುದನ್ನೂ ನಿಷೇಧಿಸಲಾಗಿದೆ. ಸಿನಿಮಾ ಮಂದಿರ ಗಳಲ್ಲಿ ಧೂಮಪಾನ ಮತ್ತು ತಂಬಾಕು ಪದಾರ್ಥಗಳ ಮಾರಾಟ ಮತ್ತು ಸೇವನೆ ನಿಷೇಧಿಸುವ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಚಿತ್ರಮಂದಿರದ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಶಾಲಾ ಕಾಲೇಜುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಧೂಮಪಾನ ನಿಷೇಧ ಫಲಕಗಳನ್ನು ಹಾಕಿಸಲು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕಾಶಿನಾಥ್ ಪವಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಡಿಎಚ್‌ಒ ಡಾ.ಎಸ್.ಆರ್. ಮಹಾಲಿಂಗಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಿವಣ್ಣ, ಜಿಲ್ಲಾ ಅಂಕಿತ ಅಧಿಕಾರಿ ಡಾ.ಬಿ. ಜಯಮ್ಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.