ADVERTISEMENT

ಗುತ್ತಿಗೆ ವೈದ್ಯರಿಗೆ ವೇತನ ಪಾವತಿಸಲು ಸದಸ್ಯರ ಆಗ್ರಹ

ಹಿರಿಯೂರು ತಾಲ್ಲೂಕು ಪಂಚಾಯ್ತಿ ಸಾಮಾನ್ಯಸಭೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 9:13 IST
Last Updated 10 ಜನವರಿ 2014, 9:13 IST

ಹಿರಿಯೂರು: ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 18 ತಿಂಗಳಿಂದ ವೇತನ ನೀಡದಿರುವುದರ ಬಗ್ಗೆ ಗುರುವಾರ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ  ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯ ಶಿವಪ್ರಸಾದಗೌಡ ಹಾಗೂ ಡಾ. ಸುಜಾತಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಗ್ರಾಮಾಂತರ ಪ್ರದೇಶದ ಆಸ್ಪತ್ರೆಗಳಿಗೆ ವೈದ್ಯರು ಬರುವುದೇ ಕಷ್ಟವಾಗಿದೆ. ಹೀಗಿರುವಾಗ ವೇತನ ನೀಡದಿದ್ದರೆ ಯಾರು ತಾನೆ ಕರ್ತವ್ಯ ನಿರ್ವಹಿಸಲು ಸಾಧ್ಯ. ತಕ್ಷಣ ವೇತನ ಬಿಡುಗಡೆ ಮಾಡಿ’ ಎಂದು ಒತ್ತಾಯಿಸಿದರು.

ಬೆಸ್ಕಾಂ ಮೇಲೆ ಆರೋಪ: ಗ್ರಾಮಾಂತರ ಪ್ರದೇಶದಲ್ಲಿ ಸಂಜೆ 6 ರಿಂದ ಬೆಳಿಗ್ಗೆ 5.30 ರವರೆಗೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಹಳ್ಳಿಯ ವಿದ್ಯಾರ್ಥಿಗಳು ಓದುವುದು ಹೇಗೆ? ಹಳ್ಳಿ–ಪಟ್ಟಣ ತಾರತಮ್ಯ ಸಲ್ಲದು. ಎರಡು ದಿನದ ಹಿಂದೆ ರೈತರು ಗಲಾಟೆ, ಪ್ರತಿಭಟನೆ ನಡೆಸಿದ್ದರಿಂದ ವಿದ್ಯುತ್ ಸರಬರಾಜು ಸುಧಾರಿಸಿದೆ. ನೂತನವಾಗಿ ಇಂಧನ ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರು ದಿನನಿತ್ಯ 8 ಗಂಟೆ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಸಚಿವರೇ ಹೇಳಿರುವಾಗ ನಿಮಗೇನು ತೊಂದರೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್ ಫಕ್ರುದ್ದೀನ್ ಪ್ರಶ್ನಿಸಿದರು.

ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ಉಪ ವಿಭಾಗದಿಂದ ಬೆಸ್ಕಾಂಗೆ ರೂ 85.33 ಲಕ್ಷ  ಬಾಕಿ ಬರಬೇಕಿದೆ. ನಿಯಮಿತ ಪ್ರಮಾಣದಲ್ಲಿ ವಿದ್ಯುತ್  ಬಳಸುವಂತೆ ಮೇಲಧಿಕಾರಿಗಳ ಆದೇಶ ಇರುವ ಕಾರಣ ಅನಿವಾರ್ಯವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಹೆಚ್ಚಿನ ಸಮಯ ವಿದ್ಯುತ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಇಇ ತಿಮ್ಮರಾಜು ತಿಳಿಸಿದರು.

ಹೊಸಯಳನಾಡು ಗ್ರಾಮದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಿ ಎರಡೂವರೆ ವರ್ಷವಾದರೂ ಉದ್ಘಾಟಿಸಿಲ್ಲ. ಆಸ್ಪತ್ರೆ ಹಾಳಾಗುವುದರ ಒಳಗೆ ರೋಗಿಗಳಿಗೆ ಸೇವೆ ಸಿಗುತ್ತದೆಯೇ? ಎಂದು ವಿ. ವೆಂಕಟೇಶ್ ಪ್ರಶ್ನೆ ಮಾಡಿದರು.

2013 ನೇ ಸಾಲಿನ ಜಾನುವಾರು ಗಣತಿಯ ಪ್ರಕಾರ ತಾಲ್ಲೂಕಿನಲ್ಲಿ 82,500 ಜಾನುವಾರುಗಳಿದ್ದು, 4,45,000 ಕುರಿಗಳಿವೆ.ನಾನಾ ಕಾರಣಗಳಿಂದ ಜಾನುವಾರುಗಳ ಸಂಖ್ಯೆ ಶೇ. 20 ರಷ್ಟು ಕಡಿಮೆಯಾಗಿದೆ. ಫೆ. 25 ರಿಂದ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕುತ್ತೇವೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ವಿವರಿಸಿದರು.

ಗುಳುಂ ಆರೋಪ: ತಾಲ್ಲೂಕು ಪಂಚಾಯ್ತಿಯ 2012–13 ಮತ್ತು 2013–14 ನೇ ಸಾಲಿನಲ್ಲಿ ಸರಕು ಸಾಗಣೆಯಲ್ಲಿ ಯಾವ ಏಜೆನ್ಸಿ ಇಲ್ಲದೆ ಸುಮಾರು ರೂ 90,000 ಗುಳುಂ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ವೀರಣ್ಣ ಒತ್ತಾಯಿಸಿದರು.

ತಾಲ್ಲೂಕುಮಟ್ಟದ ಅಧಿಕಾರಿಗಳು ಸಭೆಗೆ ಬರುವ ಮುಂಚೆ ಸಂಪೂರ್ಣ ಸಿದ್ಧತೆಯೊಂದಿಗೆ ಬರಬೇಕು. ಮಾಹಿತಿ ಇಲ್ಲದೆ ಬರುವ ಅಧಿಕಾರಿಗಳನ್ನು ಕ್ಷಮಿಸಲಾಗದು ಎಂದು ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷೆ ಲಕ್ಷ್ಮೀದೇವಿ ಎಚ್ಚರಿಕೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಭುಸ್ವಾಮಿ, ಉಪಾಧ್ಯಕ್ಷೆ ಸಿದ್ದಗಂಗಮ್ಮ ಹಾಗೂ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.