ADVERTISEMENT

ಗುರಿ ತಲುಪದ ಅಂಗವಿಕಲರ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 8:22 IST
Last Updated 10 ಡಿಸೆಂಬರ್ 2013, 8:22 IST

ಚಿತ್ರದುರ್ಗ: ‘ಪ್ರತಿ ವರ್ಷವೂ ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲು ₨ 10 ಲಕ್ಷವನ್ನು ಶಾಸಕರ ಮತ್ತು ಸಂಸತ್‌ ಸದಸ್ಯರ ಅನುದಾನದಿಂದ ನೀಡುವಂತೆ ಸರ್ಕಾರದ ಆದೇಶವಿದ್ದರೂ ಪೂರ್ತಿ ಪ್ರಮಾಣದಲ್ಲಿ ಹಣ ವಿತರಿಸದ ಕಾರಣ ಇಂದಿಗೂ ಗುರಿ ತಲುಪಲು ಸಾಧ್ಯವಾಗಿಲ್ಲ’ ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ಗುರಪ್ಪ ತಿಳಿಸಿದರು.

ನಗರದ ಐಎಂಎ ಸಭಾಂಗಣದಲ್ಲಿ ಸೋಮವಾರ ಚೈತನ್ಯ ಅಂಗವಿಕಲರ ಕ್ಷೇಮಾಭಿವೃದ್ದಿ ಸಂಘದ ಮೂರನೇ ವಾರ್ಷಿಕೋತ್ಸವ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ  ಅವರು ಮಾತನಾಡಿದರು.
ಜಿಲ್ಲೆಯಲ್ಲಿ ೩6 ಸಾವಿರ ಅಂಗವಿಲರಿದ್ದಾರೆ. ಅವರು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅಂಗವಿಕಲರಿಗೆ ಗುರುತಿನ ಚೀಟಿ ನೀಡಲಾಗಿದ್ದು, ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಐದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿಯಲ್ಲಿ ಶೇಕಡಾ ೬೦ಕ್ಕೂ ಹೆಚ್ಚು ಅಂಕ ಗಳಿಸಿದ ಅಂಗವಿಕಲ ವಿದ್ಯಾರ್ಥಿಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಪ್ರತಿ ವರ್ಷವೂ ಸಹಾಯ ಧನ ನೀಡಲಾಗುತ್ತಿದೆ ಎಂದು ವಿವರಿಸಿದರು.

‘ಆಧಾರ್’ ಯೋಜನೆಯಡಿ ಅಂಗವಿಕಲರಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ರಾಷ್ಟ್ರೀಯ ಅಭಿವೃದ್ದಿ ಹಣಕಾಸು ಸಂಸ್ಥೆಯಿಂದ ೨೦ ಮಂದಿ ಅಂಗವಿಕಲರಿಗೆ ತಲಾ ₨ ೩೦ ಸಾವಿರ ಮಂಜೂರಾಗಿದೆ. ಆದರೆ, ಇನ್ನೂ ಚೆಕ್ ವಿತರಣೆಯಾಗಿಲ್ಲ. ಅದಕ್ಕೆ ಸಾಲ ಮರು ಪಾವತಿಯಾಗದಿರುವುದು ಕೂಡ ಕಾರಣ ಎಂದರು. ಅಂಗವಿಕಲತೆ ನಿವಾರಣೆಗೋಸ್ಕರ ಶಸ್ತ್ರ ಚಿಕಿತ್ಷೆಗಾಗಿ ಇಲಾಖೆಯಿಂದ ಆರ್ಥಿಕ ನೆರವು, ರಿಯಾಯಿತಿ ದರದಲ್ಲಿ ಬಸ್‌ಪಾಸ್ ಸೌಲಭ್ಯ, ಅಲ್ಲದೇ ಅಂಗವಿಕಲ ಪುನರ್ವಸತಿ ಕೇಂದ್ರ ತೆರೆಯಲಾಗಿದ್ದು, ಅವರುಗಳಿಗೆ ಬೇಕಾಗುವ ಎಲ್ಲ ರೀತಿಯ ಸಲಕರಣೆಗಳನ್ನು ಅಲ್ಲಿಂದಲೆ ಪೂರೈಸಲು ತಯಾರಿ ನಡೆಯುತ್ತಿದೆ ಎಂದು ಹೇಳಿದರು.

ಸಾಮಾನ್ಯರು ಅಂಗವಿಕಲರನ್ನು ಮದುವೆಯಾದರೆ ಜಂಟಿ  ಖಾತೆಯಲ್ಲಿ ₨ ೫೦ ಸಾವಿರವನ್ನು ರಾಷ್ಟ್ರೀಯ ಬ್ಯಾಂಕಿನಲ್ಲಿ ಠೇವಣಿ ಇಡಲಾಗುವುದು. 5 ವರ್ಷಗಳವರೆಗೆ ಈ ಹಣ ಬಿಡಿಸುವಂತಿಲ್ಲ. ಅದರಿಂದ ಬರುವ ಬಡ್ಡಿ ಹಣವನ್ನು ಮಾತ್ರ ಪಡೆದು ಕೊಳ್ಳಬಹುದು. ಒಂದು ವೇಳೆ ಐದು ವರ್ಷದೊಳಗೆ ಪತಿ–ಪತ್ನಿಯರು ಬೇರೆ ಯಾದರೆ ₨ ೫೦ ಸಾವಿರವನ್ನು ಸರ್ಕಾರ ಹಿಂಪಡೆಯಲಿದೆ ಎಂದು ತಿಳಿಸಿದರು.

ನೀರಾವರಿ ಹೋರಾಟ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಜಯಣ್ಣ ಮಾತನಾಡಿ, ಸರ್ಕಾರಿ ನಿಯಮಾನುಸಾರ ಎಲ್ಲ ಇಲಾಖೆಗಳಲ್ಲೂ ಅಂಗವಿಕಲರಿಗೆ ಶೇ ೫ರಷ್ಟು ಹುದ್ದೆ ಮೀಸಲಿದ್ದರೂ ಕೂಡ ಭರ್ತಿ ಮಾಡಿಕೊಳ್ಳುವಂತ ನಿಯಮ ಸರಿಯಾಗಿ ಪಾಲನೆಯಾಗುತ್ತಿಲ್ಲ. ಸರ್ಕಾರ ಅಂಗವಿಕಲರ ಬಗ್ಗೆ  ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಹೇಳಿದರು.

ಚೈತನ್ಯ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಕಷ್ಟಗಳನ್ನು ಯಾರು ಕೇಳುವವರೆ ಇಲ್ಲದಂತಾಗಿದ್ದಾರೆ. ಆಶ್ರಯ ಯೋಜನೆಯಡಿ ಮನೆಗಳನ್ನು ನೀಡುವಂತೆ ನಗರಸಭೆಗೆ ಅರ್ಜಿ ಹಾಕಿ ಎಂಟು ವರ್ಷಗಳಾದರೂ ಈವರೆಗೂ ಯಾವೊಬ್ಬ ಅಂಗವಿಕಲನಿಗೂ ಮನೆ ಸಿಕ್ಕಿಲ್ಲ. ಹೀಗೆ ವಿವಿಧ ರೀತಿಯ ತೊಂದರೆಗಳು ಅಂಗವಿಕಲರನ್ನು ಬಾಧಿಸುತ್ತಿದೆ. ಈಗಲಾದರೂ ಜನಪ್ರತಿನಿಧಿಗಳು ನಮ್ಮ ಕಡೆ ಗಮನ ಹರಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮಕ್ಕಳ ಪಾಲನೆಗೆ ಪ್ರತಿ ತಿಂಗಳು ₨ 2 ಸಾವಿರ: ಶೇ ೪೦ರಷ್ಟು ದೃಷ್ಟಿಹೀನತೆಯಿರುವ ಮಹಿಳೆಗೆ ಹೆರಿಗೆಯಾದರೆ, ಮಗುವಿನ ಪಾಲನೆಗಾಗಿ ಪ್ರತಿ ತಿಂಗಳು ₨ ೨ ಸಾವಿರದಂತೆ ಎರಡು ವರ್ಷದವರೆಗೆ ಎರಡು ಹೆರಿಗೆಗೆ ನೀಡಲಾಗುವುದು.

ಎಚ್.ಪ್ಯಾರೇಜಾನ್, ಎಂ.ಟಿ. ವಾಗೀಶ್, ಜಿ.ಭಾನುಕುಮಾರ್, ಟಿ.ವೆಂಕಟೇಶ್, ಜಾಕೀರ್ ಹುಸೇನ್, ಜಬೀವುಲ್ಲಾ, ಟಿಪ್ಪು ಖಾಸೀಂ ಆಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.