ಚಿಕ್ಕಜಾಜೂರು: ಸಮೀಪದ ಗುಂಜಿಗನೂರು ಗಾಮದಲ್ಲಿ ಸಾವಿರಾರು ದನ-ಕರುಗಳಿದ್ದು, ಅವುಗಳನ್ನು ಮೇಯಿಸಲು ಗೋಮಾಳಕ್ಕೆ ಹೊಡೆದುಕೊಂಡು ಹೋಗಲು ಮತ್ತು ರೈತರು ತೋಟ-ಹೊಲಗಳಿಗೆ ಹೋಗಲು ದಾರಿಯೇ ಇಲ್ಲದಂತಾಗಿದೆ.
ಬೇಸಗೆಯಲ್ಲಿ ಕೆರೆಯಲ್ಲಿ ನೀರು ಕಡಿಮೆ ಇದ್ದಾಗ ಓಡಾಡಲು ಅಡ್ಡಿ ಇರುವುದಿಲ್ಲ. ಆದರೆ, ಮಳೆಗಾಲ ಬಂತೆಂದರೆ ಸಮಸ್ಯೆ ಶುರುವಾಗುತ್ತದೆ. ಹೊಸಕೆರೆ ನಿರ್ಮಾಣ ಆಗುವ ಮೊದಲು ಗೋಮಾಳಕ್ಕೆ ಹೋಗಲು ದಾರಿ ಇತ್ತು. ಆದರೆ, ಕೆರೆ ನಿರ್ಮಾಣವಾದ ನಂತರ ಏರಿ ಹಾಕಿದ್ದರಿಂದ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ.
ಮಳೆಗಾಲದಲ್ಲಿ ಕೆರೆ ತುಂಬಿದರೆ ಜಾನುವಾರು ಓಡಾಡಲು ದುಸ್ತರವಾಗುತ್ತದೆ. ಏರಿ ಪಕ್ಕದಲ್ಲಿ ಜಮೀನುಗಳು ಇರುವುದರಿಂದ ಬಿತ್ತನೆ ನಂತರ ಜನರಾಗಲಿ, ಜಾನುವಾರುಗಳಾಗಲಿ ಓಡಾಡುವುದು ಕಷ್ಟವಾಗಿದೆ.
ಆದ್ದರಿಂದ, ಏರಿ ಬದಿಯ ರೈತರು ಜಾನುವಾರುಗಳಿಗೆ ರಸ್ತೆ ನೀಡಲಿ ಅಥವಾ ಕೆರೆ ಏರಿಯನ್ನು ವಿಸ್ತರಿಸಿ ಜನ ಹಾಗೂ ಜಾನುವಾರುಗಳಿಗೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.