ADVERTISEMENT

ಗೋಶಾಲೆಯ ಮೇವು ವ್ಯರ್ಥ ಮಾಡದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:45 IST
Last Updated 18 ಜನವರಿ 2012, 6:45 IST

ಮೊಳಕಾಲ್ಮುರು: ಗೋಶಾಲೆಗಳಲ್ಲಿ ಜಾನುವಾರು ಮಾಲೀಕರು ಮೇವು ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಹಶೀಲ್ದಾರ್ ಕೆ. ವೆಂಕಟಪ್ಪ ಮನವಿ ಮಾಡಿದರು.

ಮಂಗಳವಾರ ಮೇವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ಹಿನ್ನೆಲೆಯಲ್ಲಿ ರಾಯಾಪುರ ಗೋಶಾಲೆಗೆ ಭೇಟಿ ನೀಡಿದ್ದ ಅವರು ಜಾನುವಾರ ಮಾಲೀಕರ ಜತೆ ಮಾತುಕತೆ ನಡೆಸಿದರು.

ರಾಯಾಪುರ ಗೋಶಾಲೆಯಲ್ಲಿ ಸುಮಾರು ಎರಡು ಸಾವಿರ ಜಾನುವಾರುಗಳಿವೆ. ಪ್ರತಿದಿನ ಪ್ರತಿ ಜಾನುವಾರುಗೆ ಐದು ಕೆಜಿಯಂತೆ ಸುಮಾರು ಮೂರು ಲೋಡ್ ಮೇವು ಬೇಕಾಗಿದೆ. ಇದನ್ನು ಸಂಕಷ್ಟದ ಸ್ಥಿತಿಯಲ್ಲಿ ತಾಲ್ಲೂಕು ಆಡಳಿತ ಕಷ್ಟಪಟ್ಟು ಪೂರೈಕೆ ಮಾಡುತ್ತಿದೆ.
 
ಮಂಗಳವಾರ ಗೋಶಾಲೆಯಲ್ಲಿದ್ದ ಮೂರು ಲೋಡ್ ಸಪ್ಪೆ ಹಾಗೂ ಎರಡು ಲೋಡ್ ಬತ್ತದ ಹುಲ್ಲನ್ನು ಗೋಶಾಲೆ ಸಿಬ್ಬಂದಿ ವಿರೋಧದ ಮಧ್ಯೆಯೇ ನೇರವಾಗಿ ಜಾನುವಾರು ಮಾಲೀಕರು ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು.

ಬಳ್ಳಾರಿ ಭಾಗದಿಂದ ಈವರೆಗೆ ಮೇವು ತರಲಾಗುತ್ತಿತ್ತು. ಈಗ ಅಲ್ಲಿಯೂ ಮೇವು ಸಿಗುತ್ತಿಲ್ಲ. ಸಿರಗುಪ್ಪ ಸುತ್ತಮುತ್ತ ಭಾಗದಿಂದ ಮೇವು ತರಲು ಮನವಿ ಮಾಡಲಾಗಿದೆ. ಜಾನುವಾರು ಮಾಲೀಕರು ಸಹಕಾರ ನೀಡದೇ ಸಮರ್ಪಕವಾಗಿ ಗೋಶಾಲೆ ನಡೆಸಲು ಸಾಧ್ಯವೇ ಇಲ್ಲ. ಮುಂದಿನ ದಿನಗಳಲ್ಲಿ ಎಂದಿಗೂ ತಾವಾಗಿಯೇ ಮೇವು ತೆಗೆದುಕೊಂಡು ಹಾಕಿಕೊಂಡು ವ್ಯರ್ಥವಾಗಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ಪ್ರತಿದಿನ ಬೆಳಿಗ್ಗೆ 11ಕ್ಕೆ ಮೇವು ವಿತರಣೆ ಆರಂಭಿಸಲಾಗುತ್ತದೆ. ಇಷ್ಟು ಹೊತ್ತ ದೂರದ ಊರುಗಳಿಂದ ಬರುವ ಜಾನುವಾರುಗಳ ಖಾಲಿ ಹೊಟ್ಟೆಯಲ್ಲಿ ಕಾಯಲು ಆಗುವುದಿಲ್ಲ ಆದ್ದರಿಂದ ಸ್ವಲ್ಪ ಮುಂಚಿತವಾಗಿ ಮೇವು ನೀಡಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ನಾಳೆಯಿಂದ ವಿತರಣೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.