ADVERTISEMENT

ಗ್ರಾಮೀಣರಿಗೆ ಕಾನೂನು ಅರಿವು ಅಗತ್ಯ

ಬಾಣಗೆರೆ: ಸಾಕ್ಷರತಾ ರಥ ಅಭಿಯಾನದ ಅಂಗವಾಗಿ ಅರಿವು-ನೆರವು ಶಿಬಿರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:20 IST
Last Updated 24 ಡಿಸೆಂಬರ್ 2012, 6:20 IST

ಚಿಕ್ಕಜಾಜೂರು: ಹಳ್ಳಿಯಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಬೇಕು ಎಂದು ನ್ಯಾಯಾಧೀಶ ಟಿ. ಶಿವಣ್ಣ ತಿಳಿಸಿದರು.

ಸಮೀಪದ ಬಾಣಗೆರೆ ಗಾಮದಲ್ಲಿ ಭಾನುವಾರ ಕಾನೂನು ಸಾಕ್ಷರತಾ ರಥ ಅಭಿಯಾನದ ಅಂಗವಾಗಿ ಕಾನೂನು ಅರಿವು-ನೆರವು ಶಿಬಿರದ ಮೂರು ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರು ಪ್ರಸ್ತುತ ದೇಶದ ಕಾನೂನು, ಹಕ್ಕು, ಕಾಯ್ದೆಗಳ ಬಗ್ಗೆ ಅರಿತು ವೈಯಕ್ತಿಕ ಅಥವಾ ಆಸ್ತಿ ಹಕ್ಕಿನ ಬಗ್ಗೆ ಮಾಹಿತಿ ಪಡೆಯಬಹುದು ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ತಿಪ್ಪಯ್ಯ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಮಾಹಿತಿ ನೀಡಿ, ಬಾಲ್ಯ ವಿವಾಹ ತಡೆ, ಬಾಗ್ಯಲಕ್ಷ್ಮೀ ಯೋಜನೆ, ಮಹಿಳೆ ಮತ್ತು ಮಕ್ಕಳ ಮಾರಾಟ ತಡೆಗಟ್ಟುವಿಕೆ ಬಗ್ಗೆ ಸಂಪೂರ್ಣ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ವಕೀಲರಾದ ಎನ್.ಎಚ್. ಶಾಂತವೀರಪ್ಪ, ಎಸ್. ವೇದಮೂರ್ತಿ ಮತ್ತು ಆರ್. ಜಗದೀಶ್ ಬಾಲ್ಯ ವಿವಾಹ, ಮಾಹಿತಿ ಹಕ್ಕು ಅಧಿನಿಯಮ ಹಾಗೂ ಜನನ ಮತ್ತು ಮರಣ ನೋಂದಣಿ ಕಾಯ್ದೆ ಬಗ್ಗೆ ಉಪನ್ಯಾಸ ನೀಡಿದರು.

ಹೊಳಲ್ಕೆರೆ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ. ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಬಿ.ಎನ್. ಪ್ರಶಾಂತ್‌ಕುಮಾರ್ ಸ್ವಾಗತಿಸಿದರು. ಎಂ.ಬಿ. ಅರುಣ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಎಸ್. ರಂಗಸ್ವಾಮಿ ವಂದಿಸಿದರು. ಗಂಗಮ್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ಜಿ. ನಟರಾಜ್, ಮಂಜಣ್ಣ, ವಲಯ ಅರಣ್ಯಾಧಿಕಾರಿ ವೈ.ಜಿ. ಚಂದ್ರಪ್ಪ, ಎಎಸ್‌ಐ ಸೋಮಶೇಖರಪ್ಪ, ಮುಖ್ಯ ಶಿಕ್ಷಕ ಶಿವಮೂರ್ತಪ್ಪ, ಸಿಆರ್‌ಪಿ ಗುರುಸ್ವಾಮಿ, ಪಿಡಿಒ ಪರಮೇಶ್ವರಪ್ಪ, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಾಣಗೆರೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.