ADVERTISEMENT

ಚಿತ್ರದುರ್ಗ: ನಗರದಾದ್ಯಂತ ಜಾಗೃತಿ ಜಾಥಾ, ಮಳಿಗೆಗಳ ಉದ್ಗಾಟನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 8:59 IST
Last Updated 2 ಡಿಸೆಂಬರ್ 2017, 8:59 IST

ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ನಗರಸಭೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ ಸಹಯೋಗದಲ್ಲಿ ಶುಕ್ರವಾರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನ ಆಚರಿಸಲಾಯಿತು.

ಏಡ್ಸ್‌ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಎಚ್‌ಐವಿ ಮತ್ತು ಏಡ್ಸ್ ಸೋಂಕು ಕುರಿತು ಜಾಗೃತಿ ಮೂಡಿಸಲು ಜಾಥಾ ಆಯೋಜಿಸಲಾಗಿತ್ತು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹಸಿರು ಬಾವುಟ ತೋರಿಸುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಕಲಾ ತಂಡಗಳು ಎಚ್‌ಐವಿ ಕುರಿತು ಜಾಗೃತಿ ಮೂಡಿಸುವ ಗೀತೆಗಳನ್ನು ಹಾಡಿದರು.

ನಗರದಾದ್ಯಂತ ಸಂಚಾರ: ನರ್ಸಿಂಗ್ ತರಬೇತಿ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಜಾಥಾದಲ್ಲಿ ಪಾಲ್ಗೊಂಡರು. ಎಚ್‌ಐವಿ ಸೋಂಕಿಗೆ ಕಾರಣ, ಅಸುರಕ್ಷತೆ ಲೈಂಗಿಕತೆ ತಡೆ, ಏಡ್ಸ್ ಸೋಂಕು ಹರಡುವ ಬಗೆ.. ಹೀಗೆ ಎಚ್ ಐ ವಿ ನಿಯಂತ್ರಣ ಕುರಿತ ಜಾಗೃತಿ ಮೂಡಿಸುವ ಫಲಕಗಳನ್ನು ಜಾಥಾದಲ್ಲಿ ಪ್ರದರ್ಶಿಸಿದರು.

ADVERTISEMENT

ಜಿಲ್ಲಾ ಆಸ್ಪತ್ರೆಯಿಂದ ಆರಂಭವಾದ ಜಾಥಾ ರಂಗಯ್ಯನಬಾಗಿಲು ದೊಡ್ಡಪೇಟೆ ಮೂಲಕ ಗಾಂಧಿ ಸರ್ಕಲ್ ತಲುಪಿತು. ಅಲ್ಲಿಂದ ಎಸ್‌ಬಿಎಂ ವೃತ್ತ, ಪ್ರವಾಸಿ ಮಂದಿರ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ವೃತ್ತದ ಮೂಲಕ ಜಿಲ್ಲಾ ಅಸ್ಪತ್ರೆಯಲ್ಲಿ ಮುಕ್ತಾಯಗೊಂಡಿತು.

ಮಾಹಿತಿ ಮಳಿಗೆ ಉದ್ಘಾಟನೆ: ಏಡ್ಸ್ ನಿಯಂತ್ರಣ ದಿನದ ಅಂಗವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತಹ ಮೂರು ಮಳಿಗೆಗಳನ್ನು ನಗರದಲ್ಲಿ ತೆರೆಯಲಾಗಿತ್ತು. ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ತೆರೆಯಲಾಗಿದ್ದ ಮಳಿಗೆಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಮತ್ತು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಉದ್ಘಾಟಿಸಿದರು.

ಎಚ್ ಐವಿ ಸೋಂಕು ತಗಲುವುದು, ಪರೀಕ್ಷೆ ವಿಧಾನ, ಪೌಷ್ಟಿಕ ಆಹಾರ ಸೇವನೆ ಸೇರಿದಂತೆ ಏಡ್ಸ್‌ ವಿರುದ್ಧ ಜಾಗೃತಿ ಮೂಡಿಸುವ ಮಾಹಿತಿ ಪತ್ರಗಳ ಬಗ್ಗೆ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕದ ಅಧಿಕಾರಿ ಡಾ. ರಂಗನಾಥ ಮಾಹಿತಿ ನೀಡಿದರು.

ಜನಸಂದಣಿ ಹೆಚ್ಚಿರುವ ಪ್ರದೇಶಗಳಾದ ಚಳ್ಳಕೆರೆ ಟೋಲ್‌ಗೇಟ್ ಮತ್ತು ಖಾಸಗಿ ಬಸ್‌ನಿಲ್ದಾಣದಲ್ಲೂ ಎಚ್‌ಐವಿ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿತ್ತು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಬಿ.ವಿ.ನೀರಜ್, ಡಾ. ಫಾಲಾಕ್ಷ ಸೇರಿ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ತಜ್ಞರು, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.