ADVERTISEMENT

ಚೆಂಡು ಹೂ ಬೆಳೆದು ಚೆಂದವಾಯ್ತು ಬದುಕು

ಗುತ್ತಿಕಟ್ಟೆ ಗೊಲ್ಲರಹಟ್ಟಿಯ ಸಣ್ಣ ಈರಮ್ಮ ಅವರ ಪುಷ್ಪ ಕೃಷಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 9:26 IST
Last Updated 12 ಡಿಸೆಂಬರ್ 2013, 9:26 IST

ಹೊಸದುರ್ಗ: ತಾಲ್ಲೂಕಿನ ಬಹುತೇಕ ರೈತರು ದಾಳಿಂಬೆ ಬೆಳೆಗೆ ಮಾರುಹೋಗಿರುವಾಗ, ಗುತ್ತಿಕಟ್ಟೆ ಗೊಲ್ಲರಹಟ್ಟಿಯ ಸಣ್ಣ ಈರಮ್ಮ ಅವರು ಕಡಿಮೆ ಖರ್ಚಿನೊಂದಿಗೆ ಚೆಂಡು ಹೂ ಬೆಳೆದು ಆರ್ಥಿಕವಾಗಿ ಸಬಲರಾಗಲು ಮುಂದಾಗಿದ್ದಾರೆ. ಕಸಬಾ ಹೋಬಳಿಯ ಕೆಲ ಗ್ರಾಮಗಳಲ್ಲಿ ಚೆಂಡು ಹೂವು ಬೆಳೆಯಲಾಗುತ್ತಿದೆ.

ಸಣ್ಣ ಈರಮ್ಮ ಕಡಿಮೆ ಭೂಮಿಯಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿ ಉತ್ತಮ ಇಳುವರಿ ಪಡೆಯುವಲ್ಲಿ ಮುಂದಾಗಿದ್ದಾರೆ. ಸಾಲಿನಿಂದ ಸಾಲಿಗೆ ಸುಮಾರು ಎರಡೂವರೆ ಅಡಿ ಅಗಲ, ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರದಲ್ಲಿ ಉತ್ತಮ ನಾಟಿ ತಳಿಯ ಚೆಂಡು ಹೂ ಸಸಿ ನೆಟ್ಟಿದ್ದಾರೆ. ಭೂಮಿಯ ಫಲವತ್ತತೆ ಹೆಚ್ಚಿಸಲು ಕುರಿಗಳನ್ನು ತರುಬಿಸುವ ಪದ್ಧತಿ ಅನುಸರಿಸಲಾಗುತ್ತಿದೆ.

ಅರ್ಧ ಎಕರೆ ಜಮೀನಿಗೆ ಚೆಂಡು ಹೂ ಬೀಜ ಹಾಕಿ ಎರಡು ತಿಂಗಳಾಗಿದೆ. ಎರಡು ಬಾರಿ ಸಮೃದ್ಧವಾಗಿ
ಹೂ ಅರಳಿದೆ. ಇನ್ನೂ ಎರಡು ತಿಂಗಳವರೆಗೆ ಹೂ ಬಿಡುತ್ತದೆ. ಕಾರ್ತೀಕ ಮಾಸದಲ್ಲಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಚೆಂಡು ಹೂವಿಗೆ ₨ 50 ರಿಂದ ₨ 60 ನಿಗದಿಯಾಗಿತ್ತು. ಈ ದರ ಕ್ರಿಸ್‌ಮಸ್‌ ಹಾಗೂ ಹೊಸ ವರ್ಷದ ಆಚರಣೆವರೆಗೂ ಇರುತ್ತದೆ ಎಂಬ ನಿರೀಕ್ಷೆ ಇದೆ ಎನ್ನುತ್ತಾರೆ ಈರಮ್ಮ.

ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆ ಬೆಳೆಯಲು ಮುಂದಾಗದ ಇವರು ಚೆಂಡು ಹೂ ಬೆಳೆಯಲು ಹೆಚ್ಚು ಕಾಳಜಿ ವಹಿಸಿದ್ದಾರೆ. ಈ ಪುಷ್ಪ ಕೃಷಿಯೇ ನಮ್ಮ ಜೀವನ ಸಾಗಿಸಲು ಆರ್ಥಿಕ ವ್ಯವಸ್ಥೆಯ ಆಧಾರ ಸ್ತಂಭವಾಗಿದೆ ಎನ್ನುತ್ತಾರೆ ಈರಮ್ಮ.

ಹೂವಿನ ಬೆಳೆಗಾರರಿಗೆ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡಬೇಕು ಎನ್ನುವುದು ಅವರ ಒತ್ತಾಯ. ವಿವಿಧ ರೀತಿಯ ಬಿಡಿ ಹೂ ಬೆಳೆಯುವ ಸಣ್ಣ ರೈತರಿಗೆ ಪ್ರತಿ ಹೆಕ್ಟೆರ್‌ಗೆ ₨ 12,000, ದೊಡ್ಡ ರೈತರಿಗೆ ₨ 7,920 ಹಾಗೆಯೇ ಸುಗಂಧರಾಜ, ಗುಲಾಬಿ ಹೂ ಬೆಳೆಯುವ ಸಣ್ಣ ರೈತರಿಗೆ ಪ್ರತಿ ಹೆಕ್ಟೆರ್‌ಗೆ ₨ 45,000, ದೊಡ್ಡ ರೈತರಿಗೆ ₨ 29,710ರವರೆಗೆ ಸಹಾಯ ಧನ ನೀಡಲಾಗುತ್ತಿದೆ ಎನ್ನುತ್ತಾರೆ ಪಟ್ಟಣದ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್‌ನಾಯಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT